ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಭೆ

ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಭೆ  Meeting of devotees regarding the selection of the successor to the Lachyan Peetha

ಇಂಡಿ 13: ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶ್ರೀ ಸಿದ್ಧಲಿಂಗ ಮಹಾರಾಜರ ಭಕ್ತರ ಸಹಯೋಗದಲ್ಲಿ ಲಚ್ಯಾಣದಲ್ಲಿ ನಡೆದ ಬೃಹತ್ ಭಕ್ತರ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.  

ಸಭೆಯಲ್ಲಿ ಒಂದು ವಾರದೊಳಗೆ ಉತ್ತರಾಧಿಕಾರಿ ಆಯ್ಕೆ ಸಮಿತಿಯ ಸಭೆ ಕರೆಯಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರಾಗಿರುವ ನಾಲ್ವರು ಪೂಜ್ಯರು ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭಾಗವಹಿಸಬೇಕು ಎಂದು ಒತ್ತಾಯಿಸಲಾಯಿತು.  

ಇದೇ ವೇಳೆ ವಿವಿಧ ಧರ್ಮಗಳ ಧರ್ಮಗುರುಗಳು, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬುದ್ಧಿಜೀವಿಗಳು, ಆಧ್ಯಾತ್ಮಿಕ ಚಿಂತಕರು, ಸಾಹಿತಿಗಳು ಹಾಗೂ ಶ್ರೀ ಸಿದ್ಧಲಿಂಗ ಮಹಾರಾಜರ ಸಂಪ್ರದಾಯದ ಗುರುಗಳನ್ನು ಆಹ್ವಾನಿಸಿ ಬೃಹತ್ ಭಕ್ತರ ಸಮಾವೇಶ ನಡೆಸಲು ಸಭೆ ನಿರ್ಧರಿಸಿತು. ಸಮಾವೇಶದಲ್ಲಿ ಭಕ್ತರು ಹಾಗೂ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಸರ್ವಾನುಮತದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಲಾಯಿತು.  

ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಕಾನೂನು ಹೋರಾಟ ನಡೆಸಲು ಅನುಭವಿ ವಕೀಲರನ್ನು ನೇಮಿಸುವ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಪ್ರತ್ಯೇಕ ಸಮಿತಿ ರಚಿಸುವ ತೀರ್ಮಾನವೂ ಕೈಗೊಳ್ಳಲಾಯಿತು.  

ಮುಂಬರುವ ಭಕ್ತರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಪ್ರಚಾರ, ಮಾಧ್ಯಮ, ವೇದಿಕೆ ಹಾಗೂ ಸ್ವಾಗತ ಸಮಿತಿಗಳನ್ನು ರಚಿಸಲಾಯಿತು. ಸಮಾವೇಶದ ಸಂಪೂರ್ಣ ವೆಚ್ಚವನ್ನು ಶ್ರೀ ಸಿದ್ಧಲಿಂಗ ಮಹಾರಾಜರ ಭಕ್ತರೇ ಭರಿಸುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.  

ಸಭೆಯಲ್ಲಿ ಬಸವರಾಜ ಎಂ. ಬಿರಾದಾರ, ಬಾಬುಗೌಡ ಸಿ. ಬಿರಾದಾರ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಎಲ್ಲ ನಿರ್ಣಯಗಳಿಗೆ ಸರ್ವಾನುಮತದ ಅನುಮೋದನೆ ನೀಡಿದರು.  ಸಭೆಯ ಅಂತ್ಯದಲ್ಲಿ ಸಿದ್ಧಲಿಂಗ ಮಹಾರಾಜರ ಸಂಪ್ರದಾಯ, ಪೀಠದ ಘನತೆ ಹಾಗೂ ಭಕ್ತರ ಸ್ವಾಭಿಮಾನ ಕಾಪಾಡುವ ನಿಟ್ಟಿನಲ್ಲಿ ಮುಂದಿನ ಎಲ್ಲ ಹೋರಾಟಗಳನ್ನು ಕಾನೂನುಬದ್ಧ ಹಾಗೂ ಶಾಂತಿಯುತವಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.