ಮುಂಬೈ, ನ, 12 : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್ ಸಿ ಪಿ ಗೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನ ನೀಡಿರುವ ಬೆನ್ನಲ್ಲೇ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತ್ವರಿತ ಸಭೆಗಳನ್ನು ನಡೆಸುತ್ತಿದ್ದಾರೆ. ಇಂದು ರಾತ್ರಿ ರಾತ್ರಿ 8.30ರ ಗಡುವಿನೊಳಗೆ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಏನಾದರೂ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಎನ್ಸಿಪಿ ಶಾಸಕರ ಸಭೆ ನಡೆಸಲಿದ್ದಾರೆ. ಈ ನಡುವೆ ಸರ್ಕಾರ ರಚನೆಗೆ ಕಾಂಗ್ರೆಸ್ ವಿಳಂಬ ನೀತಿ ಕಾರಣವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಪವಾರ್ "ಕಾಂಗ್ರೆಸ್ ಜೊತೆ ಮಾತನಾಡುತ್ತೇನೆ" ಎಂದಷ್ಟೇ ಉತ್ತರಿಸಿದರು. ಎನ್ಸಿಪಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿಲ್ಲ; ಅಜಿತ್ ಪವಾರ್. "ಸರ್ಕಾರ ರಚಿನೆಯ ಸಂಬಂಧ ಕೈಗೊಳ್ಳವ ಯಾವುದೇ ನಿರ್ಧಾರವನ್ನು ಸಾಮೂಹಿಕವಾಗಿ ಕೈಗೊಳ್ಳಲಾಗುವುದು, ನಾವು ಕಾಂಗ್ರೆಸ್ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ" ಎಂದು ಎನ್ ಸಿ ಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಸೋಮವಾರ ಈ ಸಂಬಂಧ ಕಾಂಗ್ರೆಸ್ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಭಿನ್ನಾಭಿಪ್ರಾಯಗಳನ್ನು ಒಟ್ಟಿಗೆ ಕೂತು ಚರ್ಚಿಸಿ ಮುಂದೆ ಸಾಗುತ್ತೇವೆ ಎಂದು ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ.