ಕೋವಿಡ್ -19ನಿಂದ ದಕ್ಷಿಣ ಆಫ್ರಿಕಾ ತಂಡ ಪಾರು

ಜೋಹಾನ್ಸ್ ಬರ್ಗ್, ಏ 3,ಕೊರೊನಾ ವೈರಸ್‌  ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್‌ ಸರಣಿ ರದ್ದಾಯಿತು. ಆ ಸರಣಿ ಮಧ್ಯದಲ್ಲೇ ತಾಯ್ನಾಡಿಗೆ ಹಿಂದಿರುಗಿದ್ದ ಹರಿಣ ಪಡೆಯ ಆಟಗಾರರನ್ನು ಅಲ್ಲಿನ ಸರಕಾರ 14 ದಿನಗಳ ಕಾಲ ಕ್ವಾರಂಟೈನ್( ದಿಗ್ಬಂಧನ)ನಲ್ಲಿ ಇರಿಸಿತ್ತು.
ಇದೀಗ ತಂಡದ ಎಲ್ಲ ಆಟಗಾರರ ವೈದ್ಯಕೀಯ ವರದಿ ಬಂದಿದ್ದು ಯಾವುದೇ ಆಟಗಾರರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಂಡು ಬಂದಿಲ್ಲದಿರುವುದನ್ನು ದ. ಆಫ್ರಿಕಾ ತಂಡ ಮುಖ್ಯ ವೈದ್ಯಾಧಿಕಾರಿ ಡಾ. ಶೌಯೇಬ್ ಮಾಂಜ್ರಾ ಸ್ಪಷ್ಟಪಡಿಸಿದ್ದಾರೆ. ಮಾರ್ಚ್‌ 18ರಂದು ತಾಯ್ನಾಡಿಗೆ ಹಿಂದಿರುಗಿದ್ದ ಆಟಗಾರರು ಈ ಮೂಲಕ 14 ದಿನಗಳ ಕ್ವಾರಂಟೈನ್ ಸೆರೆವಾಶವನ್ನು ಪೂರ್ಣಗೊಳಿಸಿದ್ದಾರೆ. "ಎಲ್ಲ ಆಟಗಾರರನ್ನು ಪರೀಕ್ಷಿಸಲಾಗಿದ್ದು, ಸೋಂಕಿನ ಯಾವುದೇ ಗುಣಲಕ್ಷಣಗಳು ಕಂಡು ಬಂದಿಲ್ಲ. ಕೋವಿಡ್‌-19 ಪರೀಕ್ಷೆಗಳಲ್ಲಿ ನೆಗೇಟೀವ್‌ ಎಂದು ಸಾಬೀತಾಗಿದೆ," ಎಂದು ಮಾಂಜ್ರಾ ಹೇಳಿಕೆ ನೀಡಿದ್ದಾರೆ.