ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

ಬೆಂಗಳೂರು,ಫೆ. 26,ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಆದರ್ಶಿ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೌಮ್ಯರೆಡ್ಡಿ ಶಾಸಕರಾದ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದರು. ಆಕೆಯಲ್ಲಿರುವ ಪರಿಸರ ಬಗೆಗಿನ ಕಾಳಜಿ, ಪ್ಲಾಸ್ಟಿಕ್ ವಿರುದ್ಧದ ಅಭಿಯಾನ, ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು ಶಾಸಕಿ ಎನ್ನುವ ಯಾವ ಗತ್ತೂ ಇಲ್ಲದೇ ಕೆಲಸದಲ್ಲಿಯೇ ತಮ್ಮನ್ನು ಕಾಣುವ ನಡೆಯಿಂದ ಕ್ಷೇತ್ರದಲ್ಲಿ ಇವರು ಚಿರಪರಿಚಿತ. ಕಾಲೇಜು ದಿನಗಳಿಂದಲೇ ಒಬ್ಬ ಜನಪ್ರತಿನಿಧಿಗಿರುವ ಗುರಿ ಇಟ್ಟುಕೊಂಡು ನಾಯಕತ್ವ ಗುಣ ಬೆಳೆಸಿಕೊಂಡಿದ್ದರು. 

ಈ ಬಗ್ಗೆ ಯುಎನ್ಐ ಕನ್ನಡ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಸೌಮ್ಯರೆಡ್ಡಿ, ತಮಗಿಂತಲೂ ತಮ್ಮ ಕ್ಷೇತ್ರದ ಜನರಿಗೆ ಪ್ರಶಸ್ತಿ ಸಂದಿರುವುದು ಬಹಳ ಖುಷಿತಂದಿದೆ. ಜನರಿಂದ ಆರಿಸಲ್ಪಟ್ಟಿರುವ ನಾನು ಮತಹಾಕಿದ ದೇವರುಗಳಿಗೆ ಸ್ಪಂದಿಸಬೇಕಿರುವುದು ನನ್ನ ಆದ್ಯಕರ್ತವ್ಯ. ಪರಿಸರದ ಬಗೆಗಿನ ಕಾಳಜಿ ಸ್ಪಂದಿಸುವ ಗುಣ ಪ್ರತಿಯೊಬ್ಬರಿಗೂ ಇರಲೇಬೇಕು ಎಂದರು.ತಮ್ಮ ಅಭಿವೃದ್ಧಿಯ ಕಾರ್ಯಗಳಿಗೆ ತಂದೆ ಹಾಗೂ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರ ಪ್ರೇರಣೆ ಮತ್ತು ಸಹಕಾರ ಸದಾ ಇದ್ದು, ಅವರ ಸರಳತೆ ಮತ್ತು ಜನತೆಗೆ ಸ್ಪಂದಿಸುವ ಗುಣ ತಮ್ಮಲ್ಲಿ ಮೈದಳೆದಿದೆ ಎಂದು ಸೌಮ್ಯರೆಡ್ಡಿ ಹೇಳಿದರು. ಇನ್ನು ಮಗಳ ಒಳ್ಳೆಯ ಕೆಲಸಗಳಿಗೆ ಬೆನ್ನೆಲುಬಾಗಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಹ ಮಗಳು ಆದರ್ಶ ಶಾಸಕಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.