ಶಾಂತಿನಾಥ ವಿಧಾನದಿಂದ ಆತ್ಮಶುದ್ಧಿ, ಶಾಂತಿ ಮತ್ತು ಧರ್ಮಪ್ರಭಾವನೆ: ಮುನಿಶ್ರೀ ವಿದಿತಸಾಗರ ಮಹಾರಾಜ್

ಶಾಂತಿನಾಥ ವಿಧಾನದಿಂದ ಆತ್ಮಶುದ್ಧಿ, ಶಾಂತಿ ಮತ್ತು ಧರ್ಮಪ್ರಭಾವನೆ: ಮುನಿಶ್ರೀ ವಿದಿತಸಾಗರ ಮಹಾರಾಜ್  Soul Purification, Peace, and the Propagation of Dharma through the Shantinatha Vidhana: Muni-shri V

ಲೋಕದರ್ಶನ ವರದಿ

ಗದಗ 10:  ಜೈನ ಧರ್ಮದಲ್ಲಿ ಆತ್ಮಶುದ್ಧೀಕರಣ ಹಾಗೂ ಕರ್ಮಗಳ ವಿನಾಶಕ್ಕೆ ವಿಧಿವಿಧಾನಗಳು ಅತ್ಯಂತ ಮಹತ್ವದ್ದಾಗಿದ್ದು, ’ಶಾಂತಿನಾಥ ವಿಧಾನ’ ಅತ್ಯಂತ ಪವಿತ್ರ ಹಾಗೂ ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚಾರ್ಯಶಿರೋಮಣಿ ಪರಮಪೂಜ್ಯ ಮುನಿಶ್ರೀ ವಿದಿತಸಾಗರ ಮಹಾರಾಜರು ಹೇಳಿದರು.  

ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ಶ್ರೀ ಶಾಂತಿನಾಥ ವಿಧಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜೈನ ಪರಂಪರೆಯಲ್ಲಿ 16ನೇ ತೀರ್ಥಂಕರರಾದ ಶಾಂತಿನಾಥರನ್ನು ’ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ ಎಂದರು.  

ಈ ವಿಧಾನವನ್ನು ಆಚರಿಸುವುದರಿಂದ ಮನಸ್ಸಿನ ಒತ್ತಡ, ಕೋಪ ಹಾಗೂ ಕ್ರೌರ್ಯ ನಿವಾರಣೆಯಾಗುವುದರೊಂದಿಗೆ ಸಮಾಜದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ ಹಾಗೂ ಕುಟುಂಬ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ತಿಳಿಸಿದರು.  

ವಿಧಾನದಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ ಹಾಗೂ ಅರ್ಘ್ಯ ಸೇರಿದಂತೆ ಅಷ್ಟದ್ರವ್ಯಗಳಿಂದ ಮಂತ್ರಘೋಷದೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಪೂಜೆ ಸಲ್ಲಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ, ಗದಗ ಜಿಲ್ಲೆಯಲ್ಲಿ ಶತಮಾನಗಳಿಂದ ಜೈನ ಮುನಿಗಳು ಹಾಗೂ ಆರ್ಯಿಕೆಗಳು ಧರ್ಮಪ್ರಭಾವನೆಯ ಕಾರ್ಯ ನಡೆಸುತ್ತಿದ್ದು, ಆ ಪರಂಪರೆಯನ್ನು ಮುನಿಶ್ರೀ ವಿದಿತಸಾಗರ ಮಹಾರಾಜರು ಮುಂದುವರಿಸುತ್ತಿರುವುದು ಜಿಲ್ಲೆಯ ಜೈನ ಸಮಾಜದ ಸೌಭಾಗ್ಯ ಎಂದು ಹೇಳಿದರು.  

ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುನಿಶ್ರೀಗಳ ಧರ್ಮಪ್ರಭಾವನೆಯಿಂದ ಶಾಂತಿನಾಥ ವಿಧಾನ ಯಶಸ್ವಿಯಾಗಿ ನಡೆದಿರುವುದು ಸ್ಮರಣೀಯವಾಗಿದೆ ಎಂದರು. ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಹಾಗೂ ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವ ಭರವಸೆ ದೊರೆತಿರುವುದನ್ನು ಅವರು ಉಲ್ಲೇಖಿಸಿದರು.