ನಾಳೆಯಿಂದ ಶ್ರೀ ರಾಚೋಟೇಶ್ವರ ಶಿವಯೋಗಿಗಳವರ 49ನೇ ಪುಣ್ಯಸ್ಮರಣೋತ್ಸವ

ನಾಳೆಯಿಂದ ಶ್ರೀ ರಾಚೋಟೇಶ್ವರ ಶಿವಯೋಗಿಗಳವರ 49ನೇ ಪುಣ್ಯಸ್ಮರಣೋತ್ಸವ  The 49th death anniversary commemoration of Sri Rachoteshwara Shivayogi begins tomorrow

ಬೆಳಗಾವಿ 10: ಜಿಲ್ಲೆಯ ರಾಮದುರ್ಗ ತಾಲೂಕು ತನ್ನದೇ ಆದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಗೆ ಹೆಸರುವಾಸಿಯಾಗಿದೆ. ವೀರಶೈವ ಧರ್ಮದ ಬೆಳವಣಿಗೆಗೆ ಈ ಭಾಗವು ಪ್ರಮುಖ ಕೇಂದ್ರವಾಗಿದ್ದು, ಹಿಂದೆ ನೂರಾರು ಮಠಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಲಾಗುತ್ತದೆ. ಇಂದು ಬೆರಳೆಣಿಕೆಯಷ್ಟು ಮಠಗಳು ಉಳಿದಿದ್ದರೂ, ವರ್ಷಪೂರ್ತಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ.  

ಅವುಗಳಲ್ಲಿ ಪ್ರಮುಖವಾದ ಕಿಲ್ಲಾ ತೊರಗಲ್ಲ ಸಂಸ್ಥಾನದ ಗಚ್ಚಿನಹಿರೇಮಠವು 15ನೇ ಶತಮಾನದಲ್ಲೇ ಸ್ಥಾಪನೆಯಾದ ಪುರಾತನ ಶ್ರೀಮಠವಾಗಿದೆ. ಶ್ರೀಮಠದ ಪರಮಪೂಜ್ಯ ಲಿಂಗೈಕ್ಯ ಶ್ರೀ ರಾಚೋಟೇಶ್ವರ ಶಿವಯೋಗಿಗಳವರ 49ನೇ ಪುಣ್ಯಸ್ಮರಣೋತ್ಸವವನ್ನು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಮ. ಘ. ಚ. ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಉತ್ತರಾಧಿಕಾರಿ ಶ್ರೀ ಸಿದ್ದಲಿಂಗ ದೇವರು ಅವರ ಆದೇಶದಂತೆ ಜುಲೈ 12ರಿಂದ 14ರವರೆಗೆ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.  

ಭಾನುವಾರ (ಜು.12) ಬೆಳಿಗ್ಗೆ 7 ಗಂಟೆಗೆ ಹಾಲೊಳ್ಳಿಯ ಶ್ರೀ ಶಾಸನಗೌಡ ಸಿ. ಪಾಟೀಲ ಅವರಿಂದ ಧರ್ಮಧ್ವಜಾರೋಹಣ ನೆರವೇರಲಿದ್ದು, ನಂತರ ರುದ್ರಯಾಗ ಮಹಾಪೂಜೆ ಜರುಗಲಿದೆ. ಸಂಜೆ ಧರ್ಮಸಭೆಯಲ್ಲಿ ಕಟಕೋಳ ವಿರಕ್ತಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ವೀರಯ್ಯ ಶಾಸ್ತ್ರಿಗಳು ಪ್ರವಚನ ನೀಡಲಿದ್ದು, ಶ್ರೀ ಕುಮಾರ ಎಂ. ಹುಗಾರ ಹಾಗೂ ತಂಡದಿಂದ ಗಾನಸುಧೆ ಕಾರ್ಯಕ್ರಮ ನಡೆಯಲಿದೆ.  

ಸೋಮವಾರ (ಜು.13) ಬೆಳಿಗ್ಗೆ ಸಾಮೂಹಿಕ ದೇವಿ ಪಾರಾಯಣ ಮಹಾಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ಧರ್ಮಸಭೆಯಲ್ಲಿ ವಿವಿಧ ಮಠಾಧೀಶರ ದಿವ್ಯಸಾನಿಧ್ಯದಲ್ಲಿ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಜಾಗರಣೆಯಲ್ಲಿ ವಿವಿಧ ಗ್ರಾಮಗಳ ಭಜನಾ ತಂಡಗಳು, ಡೊಳ್ಳಿನ ತಂಡಗಳು, ಕರಡಿ ಮಜಲು ಹಾಗೂ ಜೈ ಕಿಸಾನ್ ಸಾಂಸ್ಕೃತಿಕ ಕಲಾವಿದರ ತಂಡದಿಂದ ಜಾನಪದ ನೃತ್ಯ ವಿಶೇಷ ಆಕರ್ಷಣೆಯಾಗಲಿದೆ. ಅಯ್ಯಾಚಾರ ಶಿವದೀಕ್ಷೆ ಸ್ವೀಕರಿಸುವವರು ಇದೇ ದಿನದೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಶ್ರೀಮಠ ಮನವಿ ಮಾಡಿದೆ.