ಸಾಮಾಜಿಕ ಅಂತರವಲ್ಲ, ದೈಹಿಕ ಅಂತರ ಕಾಯ್ದುಕೊಳ್ಳಬೇಕು: ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್

ಬೆಂಗಳೂರು, ಏ 9, ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು, ಕೌಟುಂಬಿಕ ವಾತಾವರಣವನ್ನು ಇನ್ನಷ್ಟು ಸಹನೀಯಯಗೊಳಿಸಲು, ವ್ಯಸನಮುಕ್ತ ಬದುಕಿನೆಡೆಗೆ ಸಾಗಲು ಇದು ಸಕಾಲ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ - ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಹೇಳಿದ್ದಾರೆ. ಕೋವಿಡ್ ೧೯ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಮನೋಸ್ಥೈರ್ಯ ತುಂಬಲು ಕೇಂದ್ರ ಸರ್ಕಾರದ ಜತೆಗೂಡಿ ನಿಮ್ಹಾನ್ಸ್ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ಮನೋಸ್ಥೈರ್ಯ ಕಂಡುಕೊಳ್ಳುವ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಈ ರೀತಿಯ ಪರಿಸ್ಥಿತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದೊಂದು ಅನಿರೀಕ್ಷಿತವಾಗಿ ಎದುರಾದ ಸನ್ನಿವೇಶ. ಈ ಸಂದರ್ಭದಲ್ಲಿ ಜನತೆ ತಮ್ಮ ಸಮಯವನ್ನು ಗುಣಮಟ್ಟದಿಂದ ಕಳೆಯಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮನೆಯಲ್ಲೇ ಇದ್ದು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬಾರದು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮಗೆ ಸಮಾಜ ಇನ್ನಷ್ಟು ಸನಿಹಕ್ಕೆ ಬರಬೇಕು.  ಆದರೆ ಸಾಮಾಜಿಕ ಅಂತರಕ್ಕಿಂತ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ದೈಹಿಕ ಅಂತರವಿದ್ದರೆ ಸೋಂಕು ನಿಯಂತ್ರಿಸಬಹುದು ಎಂದು ಪ್ರತಿಪಾದಿಸಿದರು.
ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಜತೆಗೂಡಿ ರಾಷ್ಟ್ರಮಟ್ಟದ ಸಹಾಯವಾಣಿ ಆರಂಭಿಸಿದ್ದು, ಪ್ರಾಥಮಿಕ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಉಳಿದ ಭಾಷೆಗಳಿಗೂ ಶೀಘ್ರ ಸಹಾಯವಾಣಿ ಸೇವೆ ವಿಸ್ತರಿಸಲಾಗುವುದು. ಜನ ಸಾಮಾನ್ಯರು ಯಾವುದೇ ಮಾನಸಿಕ ಸಮಸ್ಯೆಗಳಿಗೆ ೦೮೦-೪೬೧೧೦೦೦೭ ಗೆ ಕರೆ ಮಾಡಬಹುದು ಎಂದರು.
ಇದರ ಜತೆಗೆ ಜನ ಸಾಮಾನ್ಯರಿಗೆ ಅಂತರ್ಜಾಲದ ಮೂಲಕ ಯೋಗ ಹೇಳಿಕೊಡುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ತಜ್ಞರು ಯೋಗಾಭ್ಯಾಸದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯೋಗ, ಪ್ರಾಣಯಾಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದರು.
ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದು, ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಇರಬೇಕು ಎಂದೇನಿಲ್ಲ. ಮನೆಯ ಹೊರಗಡೆ ಆವರಣದಲ್ಲಿ ಸುತ್ತಾಡಬಹುದು. ಜಗಲಿ ಮೇಲೆ ಕುಳಿತುಕೊಳ್ಳಬಹುದು. ಆದರೆ ಪಕ್ಕದ ಮನೆಯವರ ಜತೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು.
ಮನೆಯಲ್ಲೇ ಇದ್ದಾಗ ಬಗೆಬಗೆಯ ಆಹಾರ ಸಿದ್ಧಪಡಿಸಿ ತಿನ್ನುತ್ತಾ ಹೋದರೆ ಹೊಟ್ಟೆ ಬೆಳೆಯುತ್ತದೆ. ಬಳಿಕ ಬೊಜ್ಜು ಕರಗಿಸಲು ಪ್ರಯಾಸಪಡಬೇಕಾಗುತ್ತದೆ. ಇದು ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಹಿತ, ಮಿತ ಆಹಾರವೇ ದೇಹಕ್ಕೆ ಸೂಕ್ತ.
ಮನೆಯಲ್ಲಿದ್ದಾಗ ಯಾವ್ಯಾವುದೋ ವಾಹಿನಿಗಳನ್ನುನೋಡಬೇಡಿ. ಕೊರೋನಾ ವೈರಸ್ ಕುರಿತು ವರ್ಣರಂಜಿತವಾದ ವರದಿಗಳನ್ನು ನೋಡಿ ಮನಸ್ಸಿಗೆ ಘಾಸಿ ಮಾಡಿಕೊಳ್ಳಬಾರದು. ಅಧಿಕೃತ, ನಂಬಲರ್ಹ ಮತ್ತು ಖಚಿತ ಸುದ್ದಿಗಳನ್ನು ಮಾತ್ರ ಓದಬೇಕು, ನೋಡಬೇಕು.
ಕೊರೋನಾ ಸೋಂಕು ತಮಗೆ ತಮ್ಮ ಕುಟುಂಬದವರಿಗೆ ವ್ಯಾಪಿಸಿದರೆ ಹೇಗೆ ಎನ್ನುವ ಆತಂಕಕ್ಕೆ ಒಳಗಾಗಬಾರದು. ಹಾಗೊಂದು ವೇಳೆ ಕೊರೋನಾ ಸೋಂಕು ಬಂದರೆ ಅದನ್ನು ಧೈರ್ಯವಾಗಿ ಎದುರಿಸಬೇಕು. ಶೇ 80 ರಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ. ವಯಸ್ಸಾದವರು, ಬೇರೆ ಬೇರೆ ಆರೋಗ್ಯ ಸಮಸ್ಯೆ ಇರುವವರೇ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಯುವ ಸಮೂಹ, ಆರೋಗ್ಯವಂತರು ಹೆದರುವ ಅಗತ್ಯವಿಲ್ಲ. ಕೊರೋನಾ ಪ್ರಕೃತಿಗೆ ಒಂದು ರೀತಿ ಎಲ್.ಟಿ.ಸಿ ಇದ್ದಂತೆ. ನಮ್ಮ ಪರಿಸರವನ್ನು ಸರಿಪಡಿಸಲು ಬಂದಿರುವ ವರ ಎಂದೇ ಪರಿಗಣಿಸಬೇಕು. ಪಕ್ಷಿಗಳು, ವನ್ಯ ಮೃಗಗಳು ನಾಡಿಗೆ ಬರುತ್ತಿವೆ. ನಿವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ನದಿಗಳು ಮಾಲೀನ್ಯ ಮುಕ್ತವಾಗುತ್ತಿವೆ. ವಾಯುಗುಣಮಟ್ಟ ಹೆಚ್ಚಾಗುತ್ತಿದೆ. ಇದೆಲ್ಲವುಗಳನ್ನು ನಾವು ಸಕಾರಾತ್ಮಕವಾಗಿ ಸ್ವಾಗತಿಸಬೇಕು.
ಇನ್ನು ಲಾಕ್ ಡೌನ್ ಆದ ತಕ್ಷಣ ಎಲ್ಲರೂ ಏಕಾಂಗಿಗಳಲ್ಲ. ಹಾಗೆಂಬ ಭಾವನೆ ಸಲ್ಲದು. ಮನೆಯಲ್ಲೇ ಕುಳಿತು ಜಗತ್ತು ನೋಡಬಹುದು. ಸರ್ಕಾರ ನಮಗೆ ಎಲ್ಲಾ ಸವಲತ್ತುಗಳನ್ನು ನೀಡಿದೆ. ಮೊಬೈಲ್, ಅಂತರ್ಜಾಲದ ವ್ಯವಸ್ಥೆ ಕಲ್ಪಿಸಿದೆ. ಮನೆಯಲ್ಲೇ ಕೆಲಸ ಮಾಡುವವರಿಗೆ ಯಾವುದೇ ಸಮಸ್ಯೆ ಇಲ್ಲ. ಉಳಿದವರು ತಂತ್ರಜ್ಞಾನ ಬಳಸಿ ತಮ್ಮಕೆಲಸವನ್ನು ಹೇಗೆ ಸುಲಭ ಮಾಡಿಕೊಳ್ಳಬಹುದು ಎನ್ನುವುದರತ್ತ ಗಮನಹರಿಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ವಿಶ್ವ ಸಂಸ್ಥೆ ಸಹ ಹೇಳಿದೆ. ಭಾರತೀಯ ಸಂಸ್ಕೃತಿಯಲ್ಲಿ ಮನೆ ಮತ್ತು ಸಮಾಜದಲ್ಲಿ ಮಹಿಳೆಯರಿಗೇ ಪ್ರಧಾನ ಆದ್ಯತೆ ನೀಡಬೇಕು. ವ್ಯಸನದಿಂದ ದೂರವಾಗಿ ಹೊಸ ಬದುಕಿನತ್ತ ಮುನ್ನಡೆಯಲು ಸಕಾಲ.ಇನ್ನು ಕೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಇಂತಹವರ ರಕ್ಷಣೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಿವೆ. ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ರಚನಾತ್ಮಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಡಾ. ಬಿ.ಎನ್. ಗಂಗಾಧರ್ ಸಲಹೆ ಮಾಡಿದ್ದಾರೆ.