ವೃತ್ತಿಪರ ಬದುಕಿನಲ್ಲಿ ಕೌಶಲ್ಯಾಭಿವೃದ್ಧಿ ಅನಿವಾರ್ಯ: ಡಾ. ಹಾಜರಾ ಪರ್ವಿನ್

ವೃತ್ತಿಪರ ಬದುಕಿನಲ್ಲಿ ಕೌಶಲ್ಯಾಭಿವೃದ್ಧಿ ಅನಿವಾರ್ಯ: ಡಾ. ಹಾಜರಾ ಪರ್ವಿನ್ Skill development is essential in professional life: Dr. Parvin

 ವಿಜಯಪುರ 20: ಇಂದಿನ ವೃತ್ತಿಪರ ಬದುಕಿನಲ್ಲಿ ಕೌಶಲ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಎ. ಆರ್‌. ಎಸ್‌. ಮಹಿಳಾ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಹಾಜರಾ ಪರ್ವಿನ್ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪೇಪರ್ ಪುನರುತ್ಪಾದನಾ ಘಟಕ ಹಾಗೂ ಸಿಕ್ಯಾಬ್ ಸಂಸ್ಥೆಯ ಎ. ಆರ್‌. ಎಸ್‌. ಇನಾಮದಾರ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ "ಉದ್ಯೋಜಕತೆ ಮತ್ತು ಹೊಸ ವೃತ್ತಿ ಅವಕಾಶಗಳಿಗೆ ಕೌಶಲ್ಯ ಅಭಿವೃದ್ಧಿ" ವಿಷಯದ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದ ಜೊತೆಗೆ ವೃತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡರೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.  

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಜಯಪುರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಜಯಪುರ ಸ್ಥಾನಿಕ ಕಚೇರಿಯ ಪರಿಸರ ಅಧಿಕಾರಿ ವಿವೇಕ್ ಗುಣಗ ಮಾತನಾಡಿ, ಹೆಚ್ಚುತ್ತಿರುವ ಪರಿಸರ ಸಮಸ್ಯೆಗಳ ಇಂದಿನ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು. 

ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ,  ಹುಬ್ಬಳ್ಳಿಯ ಕೀರ್ತಿ ಪೇಪರ್ಸ್‌ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ನಿಂಗಪ್ಪ ಗೋಂದಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಗದದ ಕೈಚೀಲ ತಯಾರಿಕೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಕಾಗದದ ಕೈಚೀಲ ತಯಾರಿಕೆ ಕ್ಷೇತ್ರದಲ್ಲಿಯೂ ಸ್ವಯಂ ಉದ್ಯಮಿಗಳಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದು ಹೇಳಿದರು. 

ಗದಗಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ವೃತ್ತಿಪರ ಕೌಶಲ್ಯಗಳ ಜೊತೆಗೆ ಭಾಷಾ ಹಾಗೂ ವ್ಯಾಕರಣ ಕೌಶಲ್ಯಗಳ ಕುರಿತು ತರಬೇತಿ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಅಕ್ಷಯ ಯಾರ್ದಿ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯಗಳ ಪುನರ್ಬಳಕೆ ಹೊಸ ಯುಗದ ಉದ್ಯೋಗ ಕ್ಷೇತ್ರಗಳಾಗಿ ಬೆಳೆಯುವ ಅಪಾರ ಸಾಧ್ಯತೆಗಳಿವೆ. ಆ ಕ್ಷೇತ್ರಗಳಿಗೆ ವಿದ್ಯಾರ್ಥಿಗಳನ್ನು ಸಮರ​‍್ಕವಾಗಿ ತಯಾರು ಮಾಡುವುದು ನಮ್ಮ ಹೊಣೆಗಾರಿಕೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥ ಡಾ. ಎಂ. ಎಂ. ಬಾಗಲಕೋಟ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ವಿದ್ಯಾವತಿ ಬೆನ್ನೂರು, ಇತಿಹಾಸದ ಪ್ರಾಧ್ಯಾಪಕ ಡಾ. ಮುಷ್ತಾಕ್ ಅಹ್ಮದ್, ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.