ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ಅಗತ್ಯ : ಪ್ರೊ.ತ್ಯಾಗರಾಜ

ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ಅಗತ್ಯ : ಪ್ರೊ.ತ್ಯಾಗರಾಜ Skill-based training is necessary for students: Prof. Thyagaraja

       ಹಾರೂಗೇರಿ 20: ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ಪಠ್ಯದ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲಗಳನ್ನು ಅಭಿವೃದ್ಧಿ ಪಡಿಸಿದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಾಧ್ಯವಿದೆ ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು. 

   ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌.ದರೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್ ಆಶ್ರಯದಲ್ಲಿ ನಡೆದ ಕೌಶಲ ಅಭಿಯಾನ ಹಂತ-2 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

   ನಮ್ಮ ಪಠ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಸಾಮರ್ಥ್ಯವಿಲ್ಲ. ಯಾವುದೋ ಕಾಲದ ಪಠ್ಯಕ್ರಮವನ್ನಿಂದು ಬೋಧಿಸುತ್ತಿದ್ದೇವೆ. ಆ ಪಠ್ಯಕ್ರಮ ಈ ಕಾಲದ ಅಗತ್ಯವನ್ನು ಪೂರೈಸದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ಹೇಗೆ ಸಾಧ್ಯ. ನೂತನ ತಂತ್ರಜ್ಞಾನಗಳ ಸವಾಲುಗಳನ್ನು ಎದುರಿಸಿ, ಉದ್ಯೋಗ ಪಡೆದುಕೊಳ್ಳುವ ತರಬೇತಿ ಮತ್ತು ಸಾಮರ್ಥ್ಯ ಹೊಂದಿದ ಯುವಜನಾಂಗ ಲಭ್ಯವಾಗುತ್ತಿಲ್ಲವಾದ್ದರಿಂದ, ನಮ್ಮ ವಿದ್ಯಾರ್ಥಿಘಳ ಭವಿಷ್ಯಕ್ಕೆ ಶಕ್ತಿ ತುಂಬುವ ಕೌಶಲಾಧಾರಿತ ತರಬೇತಿ ಅನಿವಾರ್ಯವಿದೆ ಎಂದರು. 

   ಆ ನಿಟ್ಟಿನಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್ ಸಹಯೋಗದೊಂದಿಗೆ ರಾಣಿಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಆಯ್ದ 40 ಕಾಲೇಜುಗಳಲ್ಲಿ ಕೌಶಲ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿಸುವ ಮಹತ್ತರ ಯೋಜನೆ ಇದಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ಕುಲಪತಿಗಳು ಹೇಳಿದರು. 

   ಹುಬ್ಬಳ್ಳಿ ದೇಶಪಾಂಡೆ ಪೌಂಡೇಶನ್ ವ್ಯವಸ್ಥಾಪಕ ರಹೆಮಾನ ಅಮ್ಮನಗಿ ಮಾತನಾಡಿ ಇಂದಿನ ಪದವಿಗಳು ಉದ್ಯೋಗಕ್ಕೆ ಅರ್ಹತೆಯಾಗುತ್ತಿಲ್ಲ. ಅವು ಉದ್ಯೋಗ ಮುಖಿಯನ್ನಾಗಿಸುವುದರ ಜೊತೆಗೆ ಜೀವನಮುಖಿ ಮಾಡಬೇಕಿದೆ. ದೇಶಪಾಂಡೆ ಪೌಂಡೇಶನ್ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಸಾಮರ್ಥ್ಯವನ್ನು ತುಂಬುವ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. 

    ಹಿರಿಯ ಸಾಹಿತಿ ಡಾ.ವಿ.ಎಸ್‌.ಮಾಳಿ ಅಧ್ಯಕ್ಷೀಯಪರ ನುಡಿಗಳನ್ನಾಡುತ್ತ ವಿದ್ಯಾರ್ಥಿಗಳು ಜೀವನದಲ್ಲಿ ಕನಸು, ಗುರಿಗಳನ್ನು ಮುಟ್ಟಲು ಆಧುನಿಕ ಕೌಶಲಗಳನ್ನು ಆಳವಡಿಸಿಕೊಳ್ಳಬೇಕೆಂದರು. 

   ಸಂಸ್ಥೆ ಹಿರಿಯ ನಿರ್ದೇಶಕ ಆರ್‌.ಎಸ್‌.ಯಲಶೆಟ್ಟಿ, ಪ್ರಾಚಾರ್ಯ ಡಾ.ವಿನೋದ ಕಾಂಬಳೆ, ಐಕ್ಯುಎಸಿ ಸಂಯೋಜಕ ಪ್ರೊ.ಎ.ಡಿ.ಹೊನಕಾಂಬಳೆ, ಡಾ.ರಮೇಶ ಕಮತಗಿ, ಪ್ರೊ.ತ್ರೀಶಲಾ ಮಂಗಾಜೆ, ಪ್ರೊ.ರಾಜೇಂದ್ರ ಹೆಳವಿ, ಪ್ರೊ.ರುಕ್ಮಿಣಿ ಕಾಂಬಳೆ, ಪ್ರೊ.ಗುರುಪ್ರಸಾದ ಜಂಬಗಿ, ಪ್ರೊ.ರೋಹಿನಿ ಕಾಂಬಳೆ, ಪ್ರೊ.ಹಾಲಪ್ಪ ಹಾರೂಗೇರಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.