ಮಿನಿ ಟ್ರಕ್‌ಗೆ ಆಟೋರಿಕ್ಷಾ ಡಿಕ್ಕಿ: ಆರು ಮಂದಿ ಸಾವು

ಗುಂಟೂರು ಫೆ 10 :      ಆಂಧ್ರಪ್ರದೇಶದ ಈ ಜಿಲ್ಲೆಯ ಫಿರಂಗಿಪುರಂ ಮಂಡಲದ ರೆಪುಡಿ ಗ್ರಾಮದಲ್ಲಿ ಪ್ರಯಾಣಿಕ ಆಟೋರಿಕ್ಷಾವೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದು 11 ತಿಂಗಳ ಮಗು  ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ನತದೃಷ್ಟ ಆಟೋರಿಕ್ಷಾ ನರಸರಾವ್ ಪೇಟೆಯಿಂದ ಫಿರಂಗಿಪುರಂಗೆ ಸಾಗುತ್ತಿತ್ತು. ವಿರುದ್ಧ ದಿಕ್ಕಿನಿಂದ ಬಂದ ಮಿನಿ ಟ್ರಕ್ ನರಸರಾವ್ ಪೇಟೆಗೆ ಸಾಗುತ್ತಿತ್ತು  ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕಾಕನಿ ರಾಮದೇವಿ (40), ಕಾಕನಿ ಯಶೇಶ್ವಿ (11 ತಿಂಗಳು) ಮತ್ತು ಕಾಕನಿ ಮಾಣಿಕಾಂತ (5) ಎಂದು ಗುರುತಿಸಲಾಗಿದೆ. ಮೃತಪಟ್ಟ ಇತರ ಮೂವರ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಮಳೆಯಿಂದ ಮಬ್ಬುಗತ್ತಲೆ ಆವರಿಸಿ ದುರಂತ ಸಂಭವಿಸಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟದಲ್ಲಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.