ಲೋಕದರ್ಶನ ವರದಿ
ಗೋಕಾಕ 18: 12ನೇ ಶತಮಾನದಲ್ಲಿ ಶಿವಶರಣ ಹರಳಯ್ಯನವರು ಹೊತ್ತಿಸಿದ ಜ್ಯೋತಿಯ ಬೆಳಕು ಇಂದೂ ಸಹ ಅತ್ಯವಶ್ಯವಾಗಿದೆ ಎಂದು ಜಾರಕಿಹೊಳಿ ಗ್ರಾಮದ ಶ್ರೀ ಕಾಡಸಿದ್ದೇಶ್ವರ ಮಠದ ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮಿಜಿ ಹೇಳಿದರು. ಸೋಮವಾರದಂದು ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಶಿವ ಶರಣ ಹರಳಯ್ಯನವರ ಹಾಗೂ ಬುದ್ಧ, ಬಸವ, ಅಂಬೇಡಕರರ 78ನೇ ವಾರ್ಷಿಕೋತ್ಸವ ಸಪ್ತಾಹ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ವರ್ಗ ರಹಿತ, ವರ್ಣರಹಿತ ಶೋಷಣೆ ಮುಕ್ತವಾದ ಸಮಾಜ ಸ್ಥಾಪನೆಗಾಗಿ12ನೇ ಶತಮಾನದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ನಡೆದ ಐತಿಹಾಸಿಕ ಕ್ರಾಂತಿಯಲ್ಲಿ ತನ್ನನ್ನೇ ತಾನು ಅರ್ಪಿಸಿಕೊಂಡು ಹುತ್ಮಾತನಾದ ಶಿವಶರಣ ಹರಳಯ್ಯನವರು, ಪುಣ್ಯಸ್ತ್ರೀ ಕಲ್ಯಾಣಮ್ಮ ಹಾಗೂ ಅವರ ಮಗ ಶೀಲವಂತ ಇವರ ತ್ಯಾಗ ಬಲಿದಾನದ ಮೇಲೆ ಹೊಸ ಸಮಾಜ ರಚನೆಗೆ ಕ್ರಾಂತಿಯ ಬೀಜ ನೆಟ್ಟರು. ಇದು ಜಗತ್ತಿನಲ್ಲಿಯೇ ಮಾದರಿಯಾದ ಕ್ರಾಂತಿಯಾಗಿತ್ತು. ಬಸವಣ್ಣನವರಿಗೆ ಹರಳಯ್ಯನವರು ಮತ್ತು ತಮ್ಮ ಧರ್ಮಪತ್ನಿ ಕಲ್ಯಾಣಮ್ಮನವರು ತಮ್ಮ ತೊಡೆಯ ಚರ್ಮದಿಂದ ತಯ್ಯಾರಿಸಿದ ಪಾದರಕ್ಷೆಯನ್ನು ಅರ್ಪಿಸಿದ ಮಹಾನುಭಾವರಿವರು. ಹರಳಯ್ಯನವರು ಬಸವಣ್ಣನವರಿಗೆ ಶರಣು ಎಂದಿದ್ದಕ್ಕೆ ಶರಣು ಶರಣಾರ್ಥಿ ಎಂದು ಮರಳಿ ಹರಳಯ್ಯನವರಿಗೆ ಅಂದರು. ಇಂತಹ ಮಹಾ ಶಿವಶರಣರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಝಾಂಗಟಿಹಾಳದ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು. ನಿವೃತ್ತ ಉಪಪ್ರಾಚಾರ್ಯ ಪರಮೇಶ್ವರ ಕೌಜಲಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಪ್ರವಚನಕಾರರಾದ ದಯಾನಂದ ಬೆಳಗಾವಿ, ರಾಯಪ್ಪ ಮಾಡಲಗಿ, ಲಕ್ಷ್ಮಣ ಸಂತರು, ಸಮಾಜದ ಅಧ್ಯಕ್ಷ ಗಿರೀಶ ಸಾಂಗಲಿ, ಆನಂದ ಮುರಗೋಡ, ಗೌತಮ ಮುರಗೋಡ, ಸ್ವರೂಪ ಮುರಗೋಡ, ಸುರೇಶ ದೇವಮಾನೆ, ಬಸವರಾಜ ಕೊಡ್ಲ್ಯಾಳ, ಶಿವಪುತ್ರ ಸಾಂಗಲಿ, ಬಾಳು ದೇವಮಾನೆ, ಭೀಮಶಿ ಬಿರನಾಳಿ, ಯಮನವ್ವ ಸಾಂಗಲಿ, ರೋಹಿದಾಸ ದೇವಮಾನೆ, ಸಿದ್ದಪ್ಪ ಹುಲಕುಂದ, ಪರುಶರಾಮ ಕಾಂಬಳೆ, ವಿಠ್ಠಲ ಕರೋಶಿ ಇದ್ದರು.
ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ, ಅಂಬೇಡ್ಕರರ ಗದ್ದುಗೆ ಅಭಿಷೇಕವನ್ನು ದುಂಡಯ್ಯ ಹಿರೇಮಠ ಇವರಿಂದ ಜರುಗಿತು, ಹರಳಯ್ಯ ಸಮಾಜದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಜರುಗಿತು. ರಾತ್ರಿ 24 ಗಂಟೆಗಳ ಕಾಲ ಓಂಕಾರ ಮತ್ತು ಭಜನಾ ಕಾರ್ಯಕ್ರಮ ಜರುಗಿತು. ಶಿವಶರಣ ಹರಳಯ್ಯನವರ ಹಾಗೂ ಬುದ್ಧ, ಬಸವ, ಅಂಬೇಡ್ಕರರ ಭಾವಚಿತ್ರ ಭವ್ಯ ಮೆರವಣಿಗೆ ಹಾಗೂ ಕುಂಭಮೇಳವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಧ್ಯಾಹ್ನ ಮಹಾಪ್ರಸಾದ ನೇರವೆರಿತು. ಮಹಾಮಂಗಲದೊಂದಿಗೆ ಸಪ್ತಾಹ ಮುಕ್ತಾಯಗೊಂಡಿತು.