ಶ್ರೀನಗರ, ಆ 9 ಎಡಪಕ್ಷಗಳ ಹಿರಿಯ ನಾಯಕರಾದ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ನಾಯಕ ಡಿ ರಾಜಾ ಅವರುಗಳನ್ನು ಶುಕ್ರವಾರ ಬೆಳಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲೇ ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರದಲ್ಲಿನ ಗೆಳೆಯ ಯೂಸುಫ್ ತರಿಗಮಿ ಮತ್ತಿತರರನ್ನು ಭೇಟಿ ಮಾಡಲು ಡಿ ರಾಜಾ ಅವರೊಂದಿಗೆ ಇಂಡಿಗೋ ವಿಮಾನದಲ್ಲಿ ಶ್ರೀನಗರಕ್ಕೆ ಬರುತ್ತಿರುವುದಾಗಿ ಯೆಚೂರಿ ಹೊರಡುವ ಮುನ್ನ ಟ್ವೀಟ್ ಮಾಡಿದ್ದರು.
ಸಿಪಿಐ (ಎಂ) ನಾಯಕ ಗುರುವಾರ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ಪತ್ರ ಬರೆದು ತಾವು ಶ್ರೀನಗರಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ತಿಳಿಸಿದ್ದರು. ಪಕ್ಷದ ನಾಯಕರಾಗಿ ಅವರ ಜವಾಬ್ದಾರಿ ನಿರ್ವಹಿಸಲು ಅಲ್ಲಿನ ಆಡಳಿತ ಯಾವುದೇ ತೊಂದರೆ ನೀಡುವುದಿಲ್ಲ ಎಂಬ ಆಶಯವನ್ನು ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದರು.
ಪಕ್ಷದ ಸ್ಥಳೀಯ ನಾಯಕರೊಂದಿಗೆ ಚರ್ಚಿಸಲು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದ್ದ ಕಾಂಗ್ರೆಸ್ ಸಂಸದ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನೂ ಸಹ ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದು ದೆಹಲಿಗೆ ವಾಪಸ್ ಕಳುಹಿಸಲಾಗಿತ್ತು.