ಲೋಕದರ್ಶನ ವರದಿ
ಸಿಂದಗಿ 27: ತಾಲೂಕಿನ ಅಸಂತಾಪೂರ ಗ್ರಾಮದಲ್ಲಿ ಇತ್ತಿಚಿಗೆ ನಡೆದ ರೇಣುಕಾ ಮಾದರ (19) ಅವಳ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಭಂದಿಸಿದಂತೆ ಕಲಕೆರಿ ಪಿಎಸ್ಆಯ್ ಹಾಗೂ ಎಎಸ್ಆಯ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು.
ಪಟ್ಟಣದ ಸಿಪಿಆಯ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಸಂತಾಪೂರ ಗ್ರಾಮದ ರೇಣುಕಾ ಮಾದರ ಎಂಬಾತ ಬಾಲಕಿ ಹೊಸಪೆಟಿಗೆ ಹೋಗಿ ಬರುವದಾಗಿ ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಬಾಲಕಿಯ ತಾಯಿ ಭೀಮಾಬಾಯಿ ಮಾದರ ಸ.14 ರಂದು ಕಲಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕಿಂತ ಮೊದಲು ಈ ಕುರಿತು ದೂರು ಸಲ್ಲಿಸಲು ಬಾಲಕಿಯ ತಾಯಿ ಪೋಲಿಸ ಠಾಣೆಗೆ ದೂರು ಹಲವು ಬಾರಿ ನೀಡಲು ಬಂದಾಗ್ಯೂ ಪಿಎಸ್ಆಯ್ ವಿನೋದ ಪೂಜಾರಿ ಹಾಗೂ ಎಎಸ್ಆಯ್ ಎಸ್.ಬಿ.ಆಸಂಗಿ ಇವರು ಪ್ರಕರಣವನ್ನು ದಾಖಲಿಸದೆ ನಿರ್ಲಕ್ಷಿಸಿರುವ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
ಸ.19 ರಂದು ಬಾಲಕಿಯ ತಾಯಿ ಭೀಮಾಬಾಯಿ ಮಾದರ ಪುನಃ ಠಾಣೆಗೆ ಬಂದು ನನ್ನ ಮಗಳಿಗೆ ಗ್ರಾಮದ ಮಡಿವಾಳಪ್ಪ ಬಸಪ್ಪ ಬಡಿಗೇರ ಸೇರಿದಂತೆ 6 ಜನರು ಕೂಡಿಜೀವ ಬೇದರಿಕೆ ಹಾಕಿ ಅಪಹರಣ ಮಾಡಿ ಕೊಲೆ ಮಾಡಿದ್ದಾರೆ ಎಂದು ಕಲಕೇರಿ ಪೋಲಿಸ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿತನಾದ ಮಡಿವಾಳಪ್ಪ ಬಸಪ್ಪ ಬಡಿಗೇರ ಎಂಬಾತನನ್ನು ಬಂಧಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಡಿವೈಎಸ್ಪಿ ಪಿ.ಎಸ್.ನ್ಯಾಮಗೊಡ, ಸಿಪಿಆಯ್ ಸತೀಶ ಕಾಂಬಳೆ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.