ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್

ಅಹಮಾದಾಬಾದ್, ಫೆ 24, ಭಾರತಕ್ಕೆ  ಮೂರು ಶತಕೋಟಿ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳನ್ನು  ಮಾರಾಟ ಮಾಡಲು ಅಮೆರಿಕಾ ನಿರ್ಧರಿಸಿದೆ.ಎರಡು ದಿನಗಳ ಭಾರತ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಅಧ್ಯಕ್ಷ ಟ್ರಂಪ್ ಮೊಟೆರಾ ಕ್ರೀಡಾಂಗಣದಲ್ಲಿ ಜರುಗಿದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಕಿಕ್ಕಿರಿದ ಜನಸಾಗರದ ನಡುವೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರಕ್ಷಣಾ ಒಪ್ಪಂದಕ್ಕೆ ಉಭಯ ದೇಶಗಳು ನಾಳೆ ಸಹಿ ಹಾಕಲಿವೆ ಎಂದು ಅವರು ಪ್ರಕಟಿಸಿದರು. 

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸಲು ಅಮೆರಿಕಾ ಬದ್ಧವಾಗಿದೆ. ಭಯೋತ್ಪಾದನೆ ಅದರಲ್ಲೂ ವಿಶೇಷವಾಗಿ ಇಸ್ಲಾಮಿಕ್ ಉಗ್ರರ ಸವಾಲುಗಳಿಗೆ ಉತ್ತರ ಕೊಡಲು ಭಾರತ ಸೇರಿದಂತೆ ಜಗತ್ತಿನ ಇತರ ದೇಶಗಳೊಂದಿಗೆ ಕೈ ಜೋಡಿಸಿ ಹೋರಾಟ ಮಾಡಲು ಅಮೆರಿಕಾ ಸದಾ ಕಾಲ ಬದ್ಧವಾಗಿದೆ ಎಂದರು. ಅಮೆರಿಕಾದಲ್ಲಿ ಈಗ ಅಚ್ಚೆ ದಿನ್ ಆರಂಭವಾಗಿದೆ. ನಿರುದ್ಯೋಗದ ಪ್ರಮಾಣ ಇತಿಹಾಸದಲ್ಲಿಯೇ ಕೆಳಮಟ್ಟಕ್ಕೆ ಇಳಿದಿದೆ. 

ಮಿಲಿಟರಿಗೆ ಹೊಸ ರೂಪ ನೀಡಲಾಗಿದೆ ಎಂದರು. ಹಿಂದೂಗಳು, ಮುಸ್ಲಿಮರು, ಸಿಖ್ಖರು. ಜೈನರು ಹೀಗೆ ಎಲ್ಲ ಧರ್ಮದ ಜನರು ಸಹಬಾಳ್ವೆಯಿಂದ ಪ್ರಾರ್ಥನೆ ಮಾಡಲು ಅವಕಾಶವಿರುವ ಅಪರೂಪದ ದೇಶ ಎಂದರೆ ಅದು ಭರತ ಭೂಮಿ ಎಂದು ದೇಶದ ಜಾತ್ಯಾತೀತ ತತ್ವವನ್ನು ಟ್ರಂಪ್ ಮುಕ್ತ ಕಂಠದಿಂದ ಪ್ರಶಂಸಿಸಿದರು. ಪ್ರಧಾನಿ ಮೋದಿ ಛಲಗಾರ. ಏನು ಅಂದುಕೊಳ್ಳುತ್ತಾರೋ ಅದನ್ನು ಸಾಧಿಸುವ ಹಠ ಸ್ವಭಾವಿ. ಅವರ ನಾಯಕತ್ವದಲ್ಲಿ ಭಾರತ ಪ್ರಗತಿಯ ಪಥದಲ್ಲಿ ಮುಂದುವರಿಯುತ್ತಿದೆ ಎಂದೂ  ಪ್ರೇಕ್ಷಕರ ಕರತಾಡನದ ನಡುವೆ ಮೋದಿ ಆಡಳಿತಕ್ಕೆ ಟ್ರಂಪ್ ಶಹಬಾಸ್ ಹೇಳಿದರು.