ಬೆಂಗಳೂರು, ಅ 11: ಅತಿವೃಷ್ಟಿ ಚರ್ಚೆ ಸಂದರ್ಭದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಕೆಲಕಾಲ ಕಾವೇರಿದ ವಾಗ್ವಾದ, ಮಾತಿನ ಚಕಮಕಿಗೆ ಇಂದಿನ ವಿಧಾನಸಭೆಯ ಕಲಾಪ ಸಾಕ್ಷಿಯಾಯಿತು.
ಒಂದು ಹಂತದಲ್ಲಿ ಇಬ್ಬರೂ, ಬಹಳ ಉದ್ವೇಗದಲ್ಲಿ ಮಾತನಾಡಿದರು. ಸಿದ್ದರಾಮಯ್ಯನವರೇ ನಿಮಗೆ ಮಾತನಾಡಲು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅವಕಾಶ ಮಾಡಿಕೊಡಲಾಗಿದೆ. ನಿಯಮ 69 ರ ಪ್ರಕಾರ ಸಮಯ ಸೀಮಿತಗೊಳಿಸುವ ಅಧಿಕಾರ ನನಗಿದೆ. ಆದ್ದರಿಂದ ತಮ್ಮ ಭಾಷಣವನ್ನು ಆದಷ್ಟು ಬೇಗ ಮುಗಿಸಬೇಕು. ಎಚ್.ಡಿ.ಕುಮಾರಸ್ವಾಮಿ ಅವರು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಂತೆಯೇ ಕೆರಳಿ ಕೆಂಡವಾದ ಸಿದ್ದರಾಮಯ್ಯ, ನಾನು ಮಾತು ಮುಗಿಸುವುದಿಲ್ಲ. ನೀವು ಹೇಳಿದಂತೆ, ಕೇಳುವುದಿಲ್ಲ. ಇದೇನು ಸರ್ವಾಧಿಕಾರಿ ಧೋರಣೆಯೇ? ಅಧಿವೇಶನ ಏತಕ್ಕೆ ಕರೆಯುತ್ತೀರಿ? ಈ ಹಿಂದೆ ಆರು ಗಂಟೆ, ಏಳು ಗಂಟೆ ಮಾತನಾಡಿದ ಇತಿಹಾಸ ಸದನದಲ್ಲಿದೆ. ಇದು ನಿಮಗೂ ಗೊತ್ತಿದೆ. ನಾನು ನೀವು ಹೇಳಿದಂತೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದಾಗ ಕೆಲಕಾಲ ಕಾಗೇರಿ ಮತ್ತು ಸಿದ್ದರಾಮಯ್ಯ ನಡುವೆ ಬಿರುಸಿನ ವಾಗ್ವಾದ ನಡೆಯಿತು.
ಆ ಸಮಯದಲ್ಲಿ ಆಡಳಿತ ಮತ್ತು ವಿರೋಧಿ ಸದಸ್ಯರು ಸಹ ಎದ್ದು ನಿಂತು ಮಾತನಾಡಿದ್ದರಿಂದ ಸದನ ಕೆಲಕಾಲ ಗದ್ದಲಗೂಡಾಯಿತು.