ಲಿಂಗಾಂಗ ಸಾಮರಸ್ಯದಿಂದ ಸೂತಕಗಳ ಭಯವಿಲ್ಲ ವೀರಶೈವ ಜಂಗಮ ಸಂಸ್ಥೆಯ ಉಪನ್ಯಾಸದಲ್ಲಿ ಸಿದ್ಧಲಿಂಗ ಶ್ರೀ ಪ್ರತಿಪಾದನೆ

ಧಾರವಾಡ, 21 : ಸಮಸ್ತ ವೀರಶೈವ-ಲಿಂಗಾಯತರೆಲ್ಲರೂ ಸದಾ ದೇಹದ ಮೇಲೆ ಇಷ್ಟಲಿಂಗವನ್ನು ಧಾರಣೆ ಮಾಡಿದರೆ ಭೂತ-ಪ್ರೇತಗಳ ಭಯವೂ ಸೇರಿದಂತೆ ಇನ್ನಿತರೇ ಯಾವುದೇ ರೀತಿಯ ಸೂತಕಗಳ ಭಯವಿಲ್ಲವೆಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇನಾಂಹೊಂಗಲ ವಿರಕ್ತಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಪ್ರತಿಪಾದಿಸಿದರು. 

ಅವರು ನಗರದ ವೀರಶೈವ ಜಂಗಮ ಸಂಸ್ಥೆಯು ಇಲ್ಲಿಯ ತತ್ವಾನ್ವೇಶಣ ಮಂದಿರದಲ್ಲಿ ಹಮ್ಮಿಕೊಳ್ಳುವ 'ನಿರಂತರ ಉಪನ್ಯಾಸ ಮಾಲಿಕೆ' ಅಡಿಯಲ್ಲಿ 'ಲಿಂಗಾಂಗ ಸಾಮರಸ್ಯ ಎಂಬ ವಿಷಯವಾಗಿ 168ನೇ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಇಷ್ಟಲಿಂಗ ಧಾರಣೆಯ ನಂತರ ಗುರು ಮುಖೇನ ಪ್ರಾಪ್ತವಾದ ರೀತಿಯಲ್ಲಿ ಪೂಜೆ ಮಾಡಿ ತದೇಕಚಿತ್ತದಿಂದ ಲಿಂಗದ ಮೇಲೆ ದೃಷ್ಟಿಯನ್ನು ಕೇಂದ್ರಿಕರಿಸಿ ಧ್ಯಾನದ ಅನುಸಂಧಾನದಲ್ಲಿ ತಲ್ಲೀನರಾಗುವುದರಿಂದ ಆಗ ಅಂಗ ಮತ್ತು ಲಿಂಗವೆಂಬ ದ್ವಂದ್ವಗಳು ಅಳಿದು ಲಿಂಗಾಂಗ ಸಾಮರಸ್ಯ ಉಂಟಾಗುತ್ತದೆ ಎಂದರು.

ತಾಯಿಯ ಗರ್ಭದಲ್ಲಿರುವ ಪಿಂಡಕ್ಕೆ 8 ತಿಂಗಳಲ್ಲಿ ಅಂಗಾಂಗಗಳು ಮೂಡಿ ಚೈತನ್ಯ ತುಂಬಿಕೊಳ್ಳುತ್ತದೆ. ಆ ಸಮಯದಲ್ಲಿ ಹಿರೇಮಠದ ಸ್ವಾಮಿಗಳು ತಾಯಿಗೆ ಓಂಕಾರ ಮಂತ್ರ ಉಪದೇಶ ಮಾಡಿ ಗರ್ಭಕ್ಕೇ ಇಷ್ಟಲಿಂಗ ಧಾರಣೆ ಮಾಡುವುದರಿಂದ ಹುಟ್ಟುವ ಮೊದಲೆ ಗರ್ಭಸ್ಥ ಶಿಸು ಸಂಸ್ಕಾರ ಪಡೆಯುತ್ತದೆ. ನಂತರ ಅದು 84 ಲಕ್ಷ ಜೀವರಾಶಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮ ಪಡೆಯುತ್ತದೆ. ಲೌಕಿಕವಾಗಿ ಮತ್ತು ಅಲೌಕಿಕವಾಗಿ ಉತ್ತುಂಗ ಸಾಧನೆಗೆ ಇಷ್ಟಲಿಂಗದ ಮಹಾಬೆಳಗು ದಾರಿತೋರಿಸುತ್ತದೆ. ಅದಕ್ಕೆಂದೇ ಕರಸ್ಥಳದಲ್ಲಿ ಇಂಬುಗೊಂಡ ಇಷ್ಟಲಿಂಗವು ಅಗಮ್ಯ, ಅಗೋಚರ, ಅಪ್ರತಿಮ. ಇಂತಹ ವಿಶಿಷ್ಟ ಪದ್ಧತಿ ಜಗತ್ತಿನ ಬೇರೆ ಯಾವ ಧರ್ಮದಲ್ಲೂ ಇಲ್ಲ ಎಂದು ಸಿದ್ಧಲಿಂಗ ಶ್ರೀಗಳು ಬಣ್ಣಿಸಿದರು. 

 ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಬಿ. ಎಸ್. ಬಿದರಿಮಠ ಅಧ್ಯಕ್ಷತೆ ವಹಿಸಿದ್ದರು. ಪಂಪಾಪತಿ ಹಿರೇಮಠ, ಡಾ. ಮಹಾಂತಸ್ವಾಮಿ ಹಿರೇಮಠ, ಜಯಶ್ರೀ ಪುರಾಣಿಕ, ಅನುಸೂಯಾ ಹಿರೇಮಠ, ಪೂರ್ಣಿಯಾ ಹಿರೇಮಠ, ಜಿ. ಜಿ. ಹಿರೇಮಠ, ವ್ಹಿ. ಎಸ್. ಹಿರೇಮಠ, ಸಿದ್ದಲಿಂಗಸ್ವಾಮಿ, ಡಾ. ವಸ್ತ್ರದ, ತೋರಗಲ್ಲಮಠ, ಕಾಡದೇವರಮಠ, ಜಗದೀಶ ಸುಬ್ಬಾಪುರಮಠ, ಹಳ್ಳಿಗೇರಿಮಠ ಮುಂತಾದವರು ಇದ್ದರು.