ದೇವರಹಿಪ್ಪರಗಿ 2: ಸತ್ಯವಂತರ ಸಂಗವಿರಲು ತೀರ್ಥವೇತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯೇತಕೆ ಎಂಬ ಸಂತ ಕನಕದಾಸರ ವಾಣಿಯಂತೆ ವಿಜಯಪುರದ ಜ್ಞಾನ ಯೋಗಾಶ್ರಮದ ಶತಮಾನದ ಸಂತ ಪೂಜ್ಯ ಸಿದ್ದೇಶ್ವರ ಶ್ರೀಗಳ ನುಡಿಗಳು ಸಾರ್ವಕಾಲಿಕ ಸತ್ಯವಾಗಿರುವ ನುಡಿಗಳಾಗಿದ್ದು ನಾವೆಲ್ಲರೂ ಸಿದ್ದೇಶ್ವರ ಶ್ರೀಗಳ ಅನುಭವಾಮೃತವನ್ನು ಮುಂದಿನ ಪೀಳಿಗೆಗೂ ಕೂಡ ತಲುಪಿಸೋಣ ಎಂದು ನಾಗಠಾಣದ ಪ್ರಜ್ಞಾನಂದ ಶ್ರೀಗಳು ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಕಂಬಿ ಮಲ್ಲಯ್ಯನ ದೇವಸ್ಥಾನದಲ್ಲಿ ರವಿವಾರ ಸಾಯಂಕಾಲ ಆಯೋಜಿಸಿದ್ದ ಗುರುನಮನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಆರಂಭಿಸುವ ಮೊದಲು ಗ್ರಾಮದ ಶ್ರೀ ಹನುಮಾನ ದೇವಸ್ಥಾನದಿಂದ ಮಲ್ಲಯ್ಯನ ದೇವಸ್ಥಾನದವರೆಗೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಮಾಡಲಾಯಿತು.ಪೂಜ್ಯರು,ಗುರುಹಿರಿಯರು,ಸುಮಂಗಲೆಯರು, ಮಕ್ಕಳು, ಸಿದ್ದೇಶ್ವರ ಶ್ರೀಗಳ ವೇಷಧರಿಸಿದ ಶಾಲಾ ಮಕ್ಕಳು ಈ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಸಿದ್ದೇಶ್ವರ ಶ್ರೀಗಳ ಸಂತನೆಂದರೆ ಗೀತೆಯನ್ನು ಹಾಕುವುದರ ಮೂಲಕ ಸಿದ್ದೇಶ್ವರ ಶ್ರೀಗಳ ವೇಷಧಾರಿ ಮಗುವಿನಿಂದ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಪರಮಪೂಜ್ಯರಾದ ಮುಳಸಾವಳಗಿ ಗ್ರಾಮದ ಸಿದ್ದಾರೂಢ ಆಶ್ರಮದ ದಯಾನಂದ ಮಹಾಸ್ವಾಮಿಗಳು, ವಿಜಯಪುರದ ಜ್ಞಾನ ಯೋಗಾಶ್ರಮದ ಗಿರಿಜಾನಂದ ಸ್ವಾಮಿಗಳು, ಬ್ರಹ್ಮಾನಂದ ಸ್ವಾಮಿಗಳು, ಗಿರಿಜಾನಂದ ಸ್ವಾಮಿಗಳು, ಬಸವಪ್ರಸಾದ ಸ್ವಾಮಿಗಳು, ಸ್ಥಳೀಯ ನಿಂಗರಾಯ ಮಹಾರಾಜರು ಆಶೀರ್ವಚನ ನೀಡಿ,ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಭಕ್ತಿಭಾವದಿಂದ ಭಾಗವಹಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.