ಬೆಂಗಳೂರು,ಜ 29 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಳ ನೆಚ್ಚಿನ ಕಾವೇರಿ ಸರ್ಕಾರಿ ನಿವಾಸ ಖಾಲಿ ಮಾಡುವ ಸಮಯ ಬಂದೊದಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದುಕೊಂಡಂತೆ ಕಾವೇರಿ ನಿವಾಸವನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
ಕಳೆದ 6 ವರ್ಷಗಳಿಂದ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಸರ್ಕಾರ ಬಂಗಲೆ ಕಾವೇರಿ ನಿವಾಸವನ್ನು ಖಾಲಿ ಮಾಡಲು ಮನಸ್ಸು ಮಾಡಿದ್ದಾರೆ.ಈ ಮನೆಯಲ್ಲಿ ವಾಸ್ತವ್ಯ ಹೂಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿ ಡಿಪಿಎಆರ್ ನಿಂದ ಆದೇಶ ಹೊರಡಿಸಿದ್ದರು.ಆದರೆ ಸಿದ್ದರಾಮಯ್ಯ ಅವರು ಮನೆ ಖಾಲಿ ಮಾಡಿರಲಿಲ್ಲ ಈಗಾಗಿಯೇ ಬಿಎಸ್ವೈ ಅವರು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು.
ಇನ್ನು ಕಾವೇರಿ ನಿವಾಸ ಖಾಲಿ ಮಾಡಿದ ಬಳಿಕ ಸಿದ್ದರಾಮಯ್ಯ ಅವರು ಕುಮಾರಪಾರ್ಕ ಬಳಿ ಇರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ವಾಸವಿದ್ದು ಮನೆಗೆ ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಮನೆ ಪ್ರವೇಶ ಹಿನ್ನೆಲೆ ಸಿಬ್ಬಂದಿಗಳು ಸುಣ್ಣ ಬಣ್ಣದೊಂದಿಗೆ ಸಿದ್ದವಾಗಿರುವ ಮನೆಯ ಬಾಗಿಲಿಗೆ ಹೂವಿನಿಂದ ಅಲಂಕಾರ ಮಾಡಿ ಪೂಜೆ ನೆರವೇರಿಸಿದ್ದಾರೆ.ಅಲ್ಲದೆ, ಸಿದ್ದರಾಮಯ್ಯ ಅವರು, ಸತತ ಆರುವರೆ ವರ್ಷಗಳಿಂದ ಕಾವೇರಿ ನಿವಾಸಲ್ಲಿ ವಾಸ್ತವ್ಯ ಹೂಡಿದ್ದರು.ಇದೀಗ ಮನೆ ಖಾಲಿ ಮಾಡಿ ಹೊಸ ಮನೆ ಪ್ರವೇಶಿಸಲು ಮುಂದಾಗಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ರೇಸ್ ಕೋರ್ಸ್ ಬಳಿಯ ನಿವಾಸವನ್ನು ಡಿಪಿಎಆರ್ ನಿಂದ
ನೀಡಲಾಗಿತ್ತು. ಆದರೆ ಕಾವೇರಿ ನಿವಾಸವೇ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.ಬಳಿಕ ಸಚಿವ ಕೆ.ಜೆ.ಜಾರ್ಜ ಕಾವೇರಿ ನಿವಾಸ ಪಡೆದುಕೊಂಡು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು.ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕಗೂ ಕಾವೇರಿ ನಿವಾಸ ಬಿಟ್ಟಕೊಡಲು ಸಿದ್ದರಾಮಯ್ಯ ಮನಸ್ಸು ಮಾಡಲಿಲ್ಲ.
ಜೊತೆಗೆ ಮುಖ್ಯಮಂತ್ರಿಗೆ ಪತ್ರ ಬರೆದು ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಮನವಿ ಮಾಡಿದರು.ಆದರೆ ಇದಕ್ಕೊಪ್ಪದ ಯಡಿಯೂರಪ್ಪ ಕಾವೇರಿ ನಿವಾಸವನ್ನು ಸ್ವಂತ ಹಂಚಿಕೆ ಮಾಡಿಕೊಂಡು ಸಿದ್ದರಾಮಯ್ಯ ಅವರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸವನ್ನು ಹಂಚಿಕೆ ಮಾಡಿದರು.ಹಾಲಿ ಕುಮಾರ ಪಾರ್ಕ ರಸ್ತೆಯಲ್ಲಿರುವ ಮಾಜಿ ಸಚಿವ ರೇವಣ್ಣ ವಾಸ್ತವ್ಯ ಹೂಡಿದ್ದ ಮನೆಯನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಿದರು.
ಆದರೆ ಕೆಲ ದಿನಗಳ ಬಳಿಕ ಸ್ಪೀಕರ್ ಗೆ ಹಂಚಿಕೆ ಮಾಡಿದ್ದ ಕುಮಾರಪಾರ್ಕ ರಸ್ತೆಯ ಮನೆಯನ್ನು ಸಿದ್ದರಾಮಯ್ಯ ಗೆ ಹಂಚಿಕೆ ಮಾಡಿ ಕಾವೇರಿ ನಿವಾಸವನ್ನು ಮುಖ್ಯಮಂತ್ರಿ ಅವರಿಗೆ ಹಂಚಿಕೆ ಮಾಡಿಕೊಂಡರು.ಕಾವೇರಿ ನಿವಾಸಕ್ಕೆ ಶತಾಯಗತಾಯ ಕಾಲಿಡಲು ಯಡಿಯೂರಪ್ಪ ಮಾಡಿದ ಯೋಜನೆಗಳು ಕೊನೆಗೂ ಫಲ ಕೊಟ್ಟಿದೆ.ಸಿದ್ದರಾಮಯ್ಯ ಖಾಲಿ ಮಾಡಿರುವ ಮನೆ ಯನ್ನು ರಿಪೇರಿ ಹಾಗೂ ಸೂಕ್ತ ಭದ್ರತೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಮುಂದಿನ ತಿಂಗಳ ಬಳಿಕ ಯಡಿಯೂರಪ್ಪ ಬಳಸುವ ಸಾಧ್ಯತೆ ಇದೆ.