ಹೈಕಮಾಂಡ್ ಭೇಟಿಗಾಗಿ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ

ಬೆಂಗಳೂರು, ಅ 15:       ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿ ಬೀಗುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಪಕ್ಷದ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಲಿದ್ದಾರೆ. 

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ಬುಧವಾರ ಸಮಯ ನಿಗದಿಯಾಗಿದೆ. ಹೀಗಾಗಿ ಮಂಗಳವಾರ ರಾತ್ರಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.  

ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಹಲವು ದಿನಗಳಿಂದ ವಿಪಕ್ಷ ನಾಯಕನಾಗಲು ಪಕ್ಷದಲ್ಲಿ ಲಾಬಿ ನಡೆಸಿದ್ದ ಸಿದ್ದರಾಮಯ್ಯ ಕೊನೆಗೂ ತಾವು ಅಂದುಕೊಂಡಂತೆ ಯಶಸ್ವಿಯೂ ಆಗಿದ್ದಾರೆ. ಹೀಗಾಗಿ ತಮ್ಮನ್ನು ಪ್ರತಿಪಕ್ಷದ ನಾಯಕರನ್ನಾಗಿ ನೇಮಕ ಮಾಡಿರುವ ಕಾರಣ ಸೋನಿಯಾಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಲು ದೆಹಲಿಗೆ ತೆರಳುತ್ತಿದ್ದಾರೆ. 

ನಾಯಕರ ಭೇಟಿ ವೇಳೆ  ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಸ್ವಪಕ್ಷೀಯರ ಮೇಲೆ ನಡೆಯುತ್ತಿರುವ ಐಟಿ ದಾಳಿ ಕುರಿತು ಪಕ್ಷದ ಮುಂದಿನ ನಡೆ, ಹಾಗೆಯೇ ವಿಧಾನಸಭೆ ಉಪಚುನಾವಣೆಯ ತಯಾರಿ , ಪಕ್ಷ ಸಂಘಟನೆ ಕುರಿತು ಚರ್ಚಿಸಲಿದ್ದಾರೆ.  

ಅಲ್ಲದೇ ಉಪಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಮ್ಮೊಂದಿಗೆ ಸಿದ್ದರಾಮಯ್ಯ ಕೊಂಡೊಯ್ಯಲಿದ್ದು ಎಲ್ಲವೂ ಅಂದುಕೊಂಡಂತೆ ಆದಲ್ಲಿ ಬುಧವಾರದ ಹೊತ್ತಿಗೆ ಉಪ ಚುನಾವಣೆಗೆ ಕಾಂಗ್ರೆಸ್ ನ ಹುರಿಯಾಳುಗಳ ಹೆಸರು  ಅಂತಿಮಗೊಳ್ಳುವ ಸಾಧ್ಯತೆ ಇದೆ.