ಕಡೇ ಪಕ್ಷ ಆರು ದಿನ ಅಧಿವೇಶನ ವಿಸ್ತರಣೆಗೆ ಸಿದ್ದರಾಮಯ್ಯ ಪಟ್ಟು

ಬೆಂಗಳೂರು, ಅ 11:   ರಾಜ್ಯದ ಅತಿವೃಷ್ಟಿ ಪರಿಸ್ಥಿತಿ ಹಾಗೂ ವಿತ್ತೀಯ ಕಾರ್ಯ ಕಲಾಪಗಳ ಸುದೀರ್ಘ ಚರ್ಚೆಗಾಗಿ ವಿಧಾನಮಂಡಲದ ಕಲಾಪವನ್ನು ಕನಿಷ್ಠ ಆರು ದಿನಗಳವರೆಗೆ ವಿಸ್ತರಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ವಿಧಾನಸಭೆಯಲ್ಲಿಂದುಒತ್ತಾಯಿಸಿದ್ದಾರೆ. 

ಅತಿವೃಷ್ಟಿ ಕುರಿತು ಮುಂದುವರಿದ ಚಚರ್ೆಯಲ್ಲಿ  ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಭೀಕರ ಪ್ರವಾಹ ಉಂಟಾಗಿದೆ. ಲಕ್ಷಾಂತರ ಜನ, ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿದೆ. ರೈತರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಸಮಸ್ಯೆಗಳನ್ನು ಸದನದಲ್ಲಿ ವಿಸ್ತಾರವಾಗಿ ಚರ್ಚೆ ಮಾಡಬೇಕು, ಹೀಗಾಗಿ ಅತಿವೃಷ್ಟಿ ಚರ್ಚೆ ಮೂರು ದಿನ ಹಾಗೂ ವಿತ್ತೀಯ ಕಾರ್ಯಕಲಾಗಳ ಚರ್ಚೆಗೆ ಮೂರು ದಿನಗಳ ಕಾಲ ಅವಕಾಶ ಮಾಡಿಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಇದಕ್ಕೂ ಮುನ್ನ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇಂದು ಅತಿವೃಷ್ಟಿ ಚರ್ಚೆಯನ್ನು ಮತ್ತು ವಿತ್ತೀಯ ಕಾರ್ಯಕಲಾಪಗಳ ಚರ್ಚೆಯನ್ನು ಮುಗಿಸಬೇಕಾಗಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು. 

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಜನ ಕಷ್ಟದಲ್ಲಿರುವಾಗ, ಅವರ ಸಮಸ್ಯೆ ಚರ್ಚೆ ಮಾಡದಿದ್ದರೆ ವಿಧಾನಸಭೆಗೆ ಏನು ಬೆಲೆ? ಏನು ಗೌರವ? ಇದೇನು ಸರ್ವಾಧಿಕಾರಿ ಸರ್ಕಾರವೇ? ಬಜೆಟ್ ಪಾಸು ಮಾಡಲು ಇದೇ 30 ರವರೆಗೂ ಕಾಲಾವಕಾಶವಿದೆ. ನಾನು ಕೂಡ ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ. ಲೇಖಾನುದಾನ ಪಡೆದುಕೊಂಡಿದ್ದು ಇದೇ 30ರವರೆಗೂ ಅವಕಾಶವಿದೆ. ಸರ್ಕಾರಕ್ಕೆ ತುರ್ತು ಅವಶ್ಯಕತೆ ಇದ್ದರೆ ಪೂರಕ ಅಂದಾಜಿಗೆ ಈಗಲೇ ಒಪ್ಪಿಗೆ ಕೊಡಲು ನಾವು ತಯಾರಿದ್ದೇವೆ. ಇಂದೇ ಆಗಬೇಕು, ಹೀಗೇ ಆಗಬೇಕು ಎಂದು ಒತ್ತಡ ಹಾಕುವುದು ಸರಿಯಲ್ಲ. ಸರ್ಕಾರ ತನ್ನ ಧೋರಣೆ ಬದಲಾಯಿಸಿಕೊಳ್ಳಬೇಕು ಮತ್ತು ಕಲಾಪವನ್ನು ಕನಿಷ್ಠ ಆರು ದಿನಗಳವರೆಗೆ ವಿಸ್ತರಣೆ ಮಾಡಬೇಕು ಎಂದು ಪದೇ ಪದೇ ಒತ್ತಾಯಿಸಿದರು. 

ಇನ್ನು ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಕಬ್ಬು, ಈರುಳ್ಳಿ ಹೆಸರು, ತೊಗರಿ, ಭತ್ತ ಸೇರಿದಂತೆ 20 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಅವರಿಗೆಲ್ಲಾ ಕೂಡಲೇ ಪರಿಹಾರ ಕೊಡಬೇಕು. ಒಂದು ಎಕರೆ ಕಬ್ಬು ಬೆಳೆಯಲು 40 ರಿಂದ 50 ಸಾವಿರ ರೂ ಖರ್ಚು ಬರುತ್ತದೆ. ಎನ್ ಡಿ ಆರ್ ಎಫ್ ನಿಯಮದ ಪ್ರಕಾರ 13,500 ರೂ ಪರಿಹಾರ ಕೊಡುವುದು ಸರಿಯಲ್ಲ. ಕನಿಷ್ಠ ಎಕರೆಗೆ ಒಂದು ಲಕ್ಷ ರೂ ಪರಿಹಾರ ಕೊಡಬೇಕು, ರೈತರು ತಮ್ಮ ಜಮೀನಿನಲ್ಲಿ ಕಟ್ಟಿಕೊಂಡ ಮನೆಗಳು ಬಿದ್ದುಹೋಗಿದೆ. ಅವರಿಗೂ ಹತ್ತು ಲಕ್ಷ ರೂ ಪರಿಹಾರ ಕೊಡಬೇಕು. ಅದೇ ರೀತಿ, ಶಾಲಾ ಮಕ್ಕಳಿಗೆ ಕೂಡಲೇ ಪಠ್ಯಪುಸ್ತಕ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಕೆಲವು ಕಡೆ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ರೈತರು ಸಂಕಟದಲ್ಲಿದ್ದಾರೆ. ಅವರು ಮತ್ತೆ ಭೂಮಿಯನ್ನು ಹದ ಮಾಡಿಕೊಳ್ಳಲು ಸಾಕಷ್ಟು ಖರ್ಚು ಬರುತ್ತದೆ. ಆದ್ದರಿಂದ ಅವರಿಗೂ ಪರಿಹಾರ ಕೊಡಬೇಕು. ಒಟ್ಟಾರೆ ಅತಿವೃಷ್ಟಿ ಪರಿಸ್ಥಿತಿಯಿಂದ ನೊಂದು ಬೆಂದ ಜನರಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ಸ್ಪಂದನೆ ಮಾಡಿಲ್ಲ ಎಂದು ಸಿದ್ದರಾಮ್ಯಯ್ಯ ಸರ್ಕಾರವನ್ನು ತಮ್ಮದೇ ಆದ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡರು.