ಬೆಂಗಳೂರು,ಜ 29 : ಸತತ ಆರು ವರ್ಷಗಳ ವಾಸದ ಬಳಿಕ ವಿಧಾನಸಭೆ ಪ್ರತಿಪಕ್ಷ ನಾಮಯಕ ಸಿದ್ದರಾಮಯ್ಯ ಕೊನೆಗೂ ತಮ್ಮ ನೆಚ್ಚಿನ ಕಾವೇರಿ ಬಂಗಲೆ ಖಾಲಿ ಮಾಡಲು ಮನಸು ಮಾಡಿದ್ದು, ಸದ್ಯದಲ್ಲೇ ಸರ್ಕಾರದಿಂದ ಮಂಜೂರಾಗಿರುವ ನೂತನ ನಿವಾಸಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ತಮಗೆ ಮಂಜೂರಾಗಿರುವ ನಿವೇಶನಕ್ಕೆ ತೆರಳಲು ನಿರ್ಧರಿಸುವ ಮೂಲಕ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಹಾಗೂ ಸಿದ್ದರಾಮಯ್ಯ ನಡುವೆ ಕಾವೇರಿಗಾಗಿ ನಡೆಯುತ್ತಿದ್ದ ಜಟಾಪಟಿಗೆ ತೆರೆ ಬೀಳುವ ಕಾಲ ಸನ್ನಿಹಿತವಾಗುತ್ತಿದೆ. ಒಂದೆರಡು ದಿನಗಳಲ್ಲಿ ಕಾವೇರಿಯನ್ನು ಮುಖ್ಯಮಂತ್ರಿ ಅವರಿಗೆ ಬಿಟ್ಟುಕೊಡಲಿದ್ದಾರೆ.
2013ಕ್ಕೂ ಮೊದಲೇ ಸಿದ್ದರಾಮಯ್ಯ ಕಾವೇರಿಯಲ್ಲಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಿಕವೂ ಕಾವೇರಿಯಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಕಾವೇರಿಯಲ್ಲಿ ತಂಗದೇ ಜೆ.ಪಿ.ನಗರದ ಸ್ವಂತ ಮನೆಯನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ಈ ವೇಳೆ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಇದೇ ಕಾವೇರಿ ನಿವಾಸವನ್ನು ಮಂಜೂರು ಮಾಡಲಾಗಿತ್ತು. ಆದರೆ, ಕೆ.ಜೆ.ಜಾರ್ಜ್ ಬದಲಿಗೆ ಸಿದ್ದರಾಮಯ್ಯ ತಾವೇ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಸರ್ಕಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜನ್ನು ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಿತ್ತು.
ಮುಖ್ಯಮಂತ್ರಿಗೆ ಮೀಸಲಾಗಿದ್ದ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಬಿಜೆಪಿ ಸರ್ಕಾರ ಈ ಹಿಂದೆಯೇ ಸಿದ್ದರಾಮಯ್ಯ ಅವರಿಗೆ ಸೂಚಿಸಿತ್ತು. ಅದಕ್ಕಾಗಿ ಎರಡು ತಿಂಗಳ ಕಾಲಾವಕಾಶ ಕೋರಿದ್ದ ಅವರು, ಮನೆ ದುರಸ್ತಿ ನಂತರ ಕಾವೇರಿಯನ್ನು ಸರ್ಕಾರಕ್ಕೆ ವಾಪಸ್ ಮಾಡುವುದಾಗಿ ತಿಳಿಸಿದ್ದರು. ಜನವರಿ.15ರೊಳಗೆ ಕಾವೇರಿ ನಿವಾಸವನ್ನು ಖಾಲಿ ಮಾಡುವುದಾಗಿ ತಿಳಿಸಿದ್ದರು.
ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಸ್ವಂತ ನಿವಾಸ ಧವಳಗಿರಿಯಿಂದಲೇ ನಿತ್ಯ ಓಡಾಟ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಿ ಕೆಲಸ ಕಾರ್ಯಕ್ಕೆ ಧಕ್ಕೆಯಾಗಿದೆ.
ಕಾವೇರಿ ನಿವಾಸವನ್ನು ಬಿಟ್ಟುಕೊಡಬೇಕು ಎಂದು ರಾಜ್ಯ ಸರಕಾರ ಆದೇಶ ಮಾಡಿತ್ತು. ಇದಕ್ಕೆ ಸಿದ್ದರಾಮಯ್ಯ ಒಪ್ಪದೆ ಕಾವೇರಿಯನ್ನು ನನಗೇ ಕೊಡಿ ಎಂದು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಅಳವಡಿಸಲಾಗಿದ್ದ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಸರಕಾರದ ಈ ನಡೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹೊಸ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ಅಳವಡಿಸಿತ್ತು.
ಇದೀಗ ಸಿದ್ದರಾಮಯ್ಯ ಅಂತಿಮವಾಗಿ ಇನ್ನೆರಡು ದಿನಗಳಲ್ಲಿ ಕಾವೇರಿ ಖಾಲಿ ಮಾಡಲಿದ್ದು ಗಾಂಧಿ ಭವನದ ಹಿಂಭಾಗದಲ್ಲಿ ರುವ ನೂತನ ನಿವಾಸಕ್ಕೆ ವಾಸ್ತವ್ಯ ಬದಲಾಯಿಸಲಿದ್ದಾರೆ. ಬುಧವಾರ ಹೊಸ ಮನೆಯಲ್ಲಿ ಸಿದ್ದರಾಮಯ್ಯ ಕುಟುಂಬ ಸದಸ್ಯರು, ಸಿಬ್ಬಂದಿ ಹೊಸಮನೆಗೆ ಸುಣ್ಣಬಣ್ಣ ಹಚ್ಚಿ ತಳಿರುತೋರಣ ಕಟ್ಟಿ ಪೂಜೆ ಸಲ್ಲಿಸಿದರು. ಇದೀಗ ಸಿದ್ದರಾಮಯ್ಯ ಬಳಗ ಹೊಸ ಮನೆಗೆ ತೆರಳುವ ಸಿದ್ಧತೆ ನಡೆಸುತ್ತಿದೆ.