ಬೆಂಗಳೂರು : ಕರ್ನಾಟಕದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಉಳಿಸುವ ಬಗ್ಗೆ ಮನವಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹದಿನೇಳು ಅನರ್ಹ ಶಾಸಕರ ವಿಚಾರವನ್ನು ಪ್ರಸ್ತಾಪಿಸಿ, ಮೈತ್ರಿ ಸರ್ಕಾರಪತನಗೊಳಿಸಿ ನಮ್ಮನ್ನು ನಂಬಿಬಂದವರನ್ನು ಕೈಬಿಡಬಾರದು ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಯ ಆಡಿಯೋ ವಿಡಿಯೋ ಬಗ್ಗೆ ದೂರು ನೀಡಲು ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಕಾನೂನುಬಾಹಿರವಾಗಿ ಉರುಳಿಸಲಾಗಿದೆ. ಶಾಸಕರ ಕುದುರೆ ವ್ಯಾಪಾರ ನಡೆದಿದ್ದು ರಾಜ್ಯದಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಈ ಸಂಬಂಧ ಮನವಿ ಮಾಡಲು ಭೇಟಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡಿ, ರಾಷ್ಟ್ರಪತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಹಿರಿಯ ನಾಯಕರು ನಿರ್ಧರಿಸಿದ್ದು, ಸಮಯವಕಾಶ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದರು.
ಒಂದು ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಷಡ್ಯಂತ್ರ ರೂಪಿಸಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ದಿಂದ ಸತ್ಯಾಂಶ ಹೊರಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು ಎಂದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ರಾಷ್ಟ್ರಪತಿಗಳಿಗೆ ಭೇಟಿಗೆ ಸಮಯಾವಕಾಶ ಕೇಳಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಆಪರೇಷನ್ ಕಮಲ ಸಂಬಂಧ ಯಡಿಯೂರಪ್ಪ ಮಾತನಾಡಿರುವ ಆಡಿಯೋ ವಿಚಾರದ ಬಗ್ಗೆ ದೂರು ನೀಡಲು ಭೇಟಿಗೆ ಅವಕಾಶ ಕೋರಿ ನವೆಂಬರ್ 8ರಂದು ರಾತ್ರಿ ಪತ್ರ ರವಾನಿಸಲಾಗಿದೆ. ಸುಮಾರು 159 ಜನರ ಕಾಂಗ್ರೆಸ್ ನಾಯಕರ ನಿಯೋಗ ರಾಷ್ಟ್ರಪತಿಗಳ ಭೇಟಿ ಮಾಡಿ,ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ವಜಾಕ್ಕೆ ಆಗ್ರಹಿಸಲಾಗುವುದು.ಶೀಘ್ರದಲ್ಲೇ ರಾಷ್ಟ್ರಪತಿಗಳಿಂದ ಪ್ರತಿಕ್ರಿಯೆ ಸಿಗುವ ವಿಶ್ವಾಸವಿದೆ ಎಂದರ.