ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದ ಸಿದ್ದರಾಮಯ್ಯ ವರ್ತನೆ ಗೂಂಡಾ ಪ್ರವೃತ್ತಿಯದ್ದು : ಈಶ್ವರಪ್ಪ

ಬಳ್ಳಾರಿ, ಫೆ 29 :   ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಡಿರುವ ಟೀಕೆ ಹಿನ್ನೆಲೆಯಲ್ಲಿ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಗೂಂಡಾ ಪ್ರವೃತ್ತಿಯಿಂದ ಕೂಡಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈರಶ್ವರಪ್ಪ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕರು ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರಾ ವೈಯಕ್ತಿಕ ವಿಚಾರಗಳನ್ನು  ತೆಗೆದುಕೊಂಡು ಒಬ್ಬರಿಗೊಬ್ಬರು ಬೈಯ್ಯುವುದು ಹಿಯ್ಯಾಳಿಸುವುದು ನಡೆಯುತ್ತಿದೆ. ಇದು ಸರಿಯಲ್ಲ. ಯತ್ನಾಳ್ ಅವರು ಹೇಳಿಕೆ ಯಾವ ನೆಲೆಗಟ್ಟಿನಿಂದ ಕೂಡಿದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಾಗಿದೆ ಎಂದರು. 

ಗ್ರಾಮೀಣಾಭಿವೃದ್ಧಿ ಇಲಾಖೆ ಯಾವುದೇ ಆರ್ಥಿಕ ಮುಗ್ಗಟ್ಟು ಇಲ್ಲ. ನಾನು ಈ ಇಲಾಖೆಯ ಕಾರ್ಯಭಾರ ವಹಿಸಿಕೊಂಡಾಗ, ಉದ್ಯೋಗ ಖಾತ್ರಿ ಯೋಜನೆಯಡಿ 2800 ಕೋಟಿ ರೂ. ಬಾಕಿ ಇತ್ತು. ಈಗ 200 ಕೋಟಿಗೆ ಇಳಿದಿದೆ. ಉದ್ಯೋಗ ಖಾತ್ರಿ ಮಾಡಿದವರಿಗೆ ಸಕಾಲದಲ್ಲಿ ದಾಖಲೆಗಳನ್ನು ಸಲ್ಲಿಸಿದರೆ ಹಣ ಬಿಡುಗಡೆಯಾಗುತ್ತದೆ. ರಾಜ್ಯದ ಪ್ರವಾಹ ಪೀಡಿತ 103 ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1500 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಬಳಿಕ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ 80 ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ಭಾರತ್ ವಿಷನ್ ಯೋಜನೆಯಡಿ ಘನ ತ್ಯಾಜ್ಯ ಸಂಗ್ರಹಣೆ ವಾಹನಗಳನ್ನು ವಿತರಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ನಗರಗಳಂತೆ ಗ್ರಾಮೀಣ ಪ್ರದೇಶದಲ್ಲೂ ಸ್ವಚ್ಛತೆ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅನುಷ್ಠಾನಗೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ರಾಜ್ಯದಲ್ಲಿ 6021 ಗ್ರಾಮ ಪಂಚಾಯಿತಿಗಳ ಪೈಕಿ  ಈ ವರ್ಷ ರಾಜ್ಯದ 3000 ಗ್ರಾಮ ಪಂಚಾಯಿತಿಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ ಎಂದರು. 

ಭಾರತ ಸಂಸ್ಕತಿಯಲ್ಲಷ್ಟೇ ಮುಂದುವರೆದಿಲ್ಲ. ಸ್ವಚ್ಛತೆಯಲ್ಲೂ ಪ್ರಗತಿ ಸಾಧಿಸುತ್ತಿದೆ ಎನ್ನುವುದನ್ನು ತೋರಿಸಬೇಕಾಗಿದೆ. ಸ್ವಚ್ಛತೆ ಇದ್ದರೆ ಮಾತ್ರ ಆರೋಗ್ಯ. ಈ ನಿಟ್ಟಿನಲ್ಲಿ ಮೋದಿ ಅವರು ಸ್ವಚ್ಛ ಭಾರತದ ಕನಸು ಕಂಡಿದ್ದಾರೆ. ಭಾರತವು ಹಳ್ಳಿಗಳ ದೇಶವಾದರೂ ಅದು ಅಭಿವೃದ್ಧಿಯತ್ತ ಸಾಗಿದೆ. ಇಲ್ಲಿಯೂ ಜನರು ಉತ್ತಮ ಪರಿಸರದಲ್ಲಿ ಬದುಕಲು ಅನುವಾಗುವಂತೆ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿ ಪ್ರತಿ ಗ್ರಾಮಪಂಚಾಯಿತಿಗೆ 20 ಲಕ್ಷ ರೂ,ಗಳನ್ನು ಕೇಂದ್ರ ಸರಕಾರ ಮಂಜೂರು ಮಾಡಿದ್ದು, ಇದರಡಿ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು. 

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳನ್ನು ಸೌರ ವಿದ್ಯುತ್‍ ವ್ಯಾಪ್ತಿಗೆ ಒಳಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಅಲ್ಲದೆ, ಪ್ರಧಾನಿ ಅವರ ಆಶಯದಂತೆ ಮನೆ ಮನೆಗೂ ನಲ್ಲಿ ನೀರು ಸರಬರಾಜು ಮಾಡುವ ಪ್ರಯತ್ನವೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ನಡೆದಿದೆ ಎಂದರು.