ಶ್ರೀ ಸಿದ್ದೇಶ್ವರ ಸ್ವಾಮೀಜಿ 2 ನೇ ವರ್ಷದ ಗುರುನಮನ ಕಾರ್ಯಕ್ರಮ
ವಿಜಯಪುರ 18: ಹೂವಿನ ಪರಿಮಳವನ್ನು ಪರಿಸರಕ್ಕೆ ಹರಡುವ ವಾಯುವಿನಂತೆ ಸಮಾಜದಲ್ಲಿ ಸಚ್ಚಿಂತನೆಗಳನ್ನು ಬಿತ್ತರಿಸುವ ಮಾಧ್ಯಮಗಳ ಪಾತ್ರ ಪರಮ ಪವಿತ್ರ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಹೇಳಿದರು.
ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಯವರ 2ನೇ ವರ್ಷದ ಗುರುನಮನ ಕಾರ್ಯಕ್ರಮದ ಅಂಗವಾಗಿ ಬುಧವಾರ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು ಮಾಧ್ಯಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ ಎಂದರು. ಸಿದ್ದೇಶ್ವರ ಸ್ವಾಮೀಜಿ ಮಾಧ್ಯಮಗಳ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದರು. ಪ್ರತಿದಿನ ಪತ್ರಿಕೆಗಳನ್ನು ಓದುವುದು ಅವರ ದಿನಚರಿಯ ಭಾಗವಾಗಿತ್ತು. ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಆರೋಗ್ಯ ವಿಚಾರಿಸಲು ಬಂದಿದ್ದ ಮಾಧ್ಯಮಗಳ ಪ್ರತಿನಿಗಳ ಯೋಗಕ್ಷೇಮವನ್ನು ವಿಚಾರಿಸಿದ್ದ ಶ್ರೀಗಳು ಅವರಿಗೆಲ್ಲ ಹೋಳಿಗೆ ಪ್ರಸಾದ ಮಾಡಿಸಿದ್ದನ್ನು ಮೆಲುಕು ಹಾಕಿದರು.
ಪ್ರಸಕ್ತ ವರ್ಷದ ಗುರುನಮನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಮಾಧ್ಯಮಗಳ ಸಹಕಾರವೂ ಅಗತ್ಯ. ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಇಲ್ಲಿನ ಕಾರ್ಯಕ್ರಮಗಳ ಬಗ್ಗೆ ಈ ಹಿಂದೆಯೂ ಅರ್ಥಪೂರ್ಣವಾಗಿ ನಿರ್ವಹಿಸುತ್ತ ಬಂದಿರುವ ಮಾಧ್ಯಮಗಳು ಈ ಬಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.ಜ್ಞಾನಯೋಗಾಶ್ರಮದ ಉಪಾಧ್ಯಕ್ಷ ಗುರುಗಳಾದ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಗ್ರಾಮ ಗ್ರಾಮಗಳಲ್ಲಿ ಜ್ಞಾನದಾಸೋಹ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಗುರುನಮನ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. ಈಗ ವಿಜಯಪುರ ನಗರದ ವಿವಿಧ ಬಡಾವಣೆಗಳಲ್ಲಿ ಜ್ಞಾನದಾಸೋಹ ನಡೆಯುತ್ತಿದೆ. ಡಿ. 25 ರಿಂದ ಜ. 2 ರ ವರೆಗೆ ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮದ ಅಂಗವಾಗಿ ನಾನಾ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸುಧಾರಿತ ಕೃಷಿ, ಜ್ಞಾನಾರಾಧನೆ, ಗ್ರಾಮ ಸಂಸ್ಕೃತಿ, ಯೋಗ ಜೀವನ, ಮಾತೃಭಕ್ತಿ, ಜಾಗತಿಕ ತಾತ್ವಿಕ ಚಿಂತನೆಗಳು, ಸೇವಾಭಾವ ಹಾಗೂ ಗುರುದೇವರ ಬದುಕು ಎಂಬ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ. ಜ.1 ರಂದು ಗುರುದೇವರಿಗೆ ದೀಪನಮನ ಹಾಗೂ ಜ. 2 ರಂದು ಪುಷ್ಪನಮನ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ ಮಾತನಾಡಿ, ಜ್ಞಾನದಾಸೋಹಿ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಮಾಧ್ಯಮಗಳಿಗೆ ಅಪಾರ ಶ್ರದ್ಧಾ ಭಕ್ತಿಯಿತ್ತು. ಅವರ ಪ್ರವಚನ ಸಾರಗಳನ್ನು ಪ್ರಕಟಿಸದ ಪತ್ರಿಕೆಗಳೇ ಇಲ್ಲ. ಗುರುನಮನ ಕಾರ್ಯಕ್ರಮವನ್ನು ಮಾಧ್ಯಮದವರು ಯಶಸ್ವಿಗೊಳಿಸಲು ಸಕಲ ಸಹಕಾರ ನೀಡುವರು. ಪ್ರಚಾರ ಸಮಿತಿಗೆ ಯಾವುದೇ ಅಧ್ಯಕ್ಷ, ಉಪಾಧ್ಯಕ್ಷರು, ಪದಾಕಾರಿಗಳಿರುವುದಿಲ್ಲ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಸಂಯೋಜಕರಾಗಿ ಕಾರ್ಯನಿರ್ವಹಿಸುವರು ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳು ಗ್ರಾಂಥಿಕ ಭಾಷೆಯಲ್ಲಿ ಅತ್ಯಂತ ಸರಳವಾಗಿ ಪ್ರವಚನ ನೀಡುತ್ತಿದ್ದರು. ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಮಾಧ್ಯಮಗಳಿಗೆ ಅವರ ಆಶೀರ್ವಚನವೇ ದೊಡ್ಡ ಸುದ್ದಿಯಾಗಿರುತ್ತಿತ್ತು. ಗುರುನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿಜಯಪುರದ ಎಲ್ಲ ಮಾಧ್ಯಮ ಬಂಧುಗಳು ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಭೆಯಲ್ಲಿ ಶ್ರದ್ಧಾನಂದ ಸ್ವಾಮೀಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಶ ದೇವಗಿರಿ, ವಿಡಿಎ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ, ವಿವಿಧ ಮಾಧ್ಯಮಗಳ ಪ್ರತಿನಿಗಳು, ಗುರುನಮನ ಕಾರ್ಯಕ್ರಮದ ವಿವಿಧ ಸಮಿತಿಗಳ ಪ್ರಮುಖರು ಇದ್ದರು.