ಶ್ರೀ ಕೃಷ್ಣ ಎಲ್ಲ ಕಾಲಕ್ಕೂ ಮಾರ್ಗದರ್ಶನ ಮಾಡುವ ಒಬ್ಬ ಶ್ರೇಷ್ಠ ಮಾರ್ಗದರ್ಶಕ: ಡಾ. ಶಶಿಧರ ನರೇಂದ್ರ

ಶ್ರೀ ಕೃಷ್ಣ ಎಲ್ಲ ಕಾಲಕ್ಕೂ ಮಾರ್ಗದರ್ಶನ ಮಾಡುವ ಒಬ್ಬ ಶ್ರೇಷ್ಠ ಮಾರ್ಗದರ್ಶಕ: ಡಾ. ಶಶಿಧರ ನರೇಂದ್ರ Shri Krishna is a great guide who guides for all times: Dr. Shashidhar Narendra

ಧಾರವಾಡ 17: ದೇಶದಲ್ಲಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ನಮಗೆ ಕೃಷ್ಣ ಎಲ್ಲ ರೀತಿಯಲ್ಲೂ ಎಲ್ಲ ಕಾಲದಲ್ಲೂ ಮಾರ್ಗದರ್ಶನ ಮಾಡುವ ಒಬ್ಬ ಶ್ರೇಷ್ಠ ಮಾರ್ಗದರ್ಶಕನಾಗಿದ್ದಾನೆ. ನಾವಿಂದು ಕೃಷ್ಣ ಜನ್ಮಾಷ್ಟಮಿಯನ್ನು ಬೇಂದ್ರೆಯವರ ಕರ್ಮಭೂಮಿಯಲ್ಲಿ ಆಚರಿಸುತ್ತಿರುವುದು ಬಹಳ ಓಚಿತ್ಯಪೂರ್ಣವಾದದ್ದು,  ಬೇಂದ್ರೆಯವರು ಆಕಾಶವಾಣಿಗಾಗಿ ರಚಿಸಿದ್ದ ಗೋಕುಲಾಷ್ಟಮಿ ಎಂಬ ವಿಶಿಷ್ಟ ರೂಪಕದಲ್ಲಿ ಬಂದಿರುವ ಶ್ರೀ ಕೃಷ್ಣನ ಅವತಾರಗಳ ಲೀಲೆಗಳ ಕುರಿತು  ಹಿರಿಯ ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಹೇಳಿದರು.   

ದಿ. 16 ರಂದು ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಧಾರವಾಡ ಹಾಗೂ ಭರತ ನೃತ್ಯ ಅಕಾಡೆಮಿಯ ಸಹಯೋಗದಲ್ಲಿ ಏರಿ​‍್ಡಸಿದ್ದ ಕೃಷ್ಣ ಜನ್ಮಾಷ್ಟಮಿ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಶಶಿಧರ ನರೇಂದ್ರ ಮುಂದುವರೆದು ಮಾತನಾಡುತ್ತ ಶ್ರೀ ಕೃಷ್ಣನು ಅನೇಕ ಪ್ರಸಂಗಗಳಲ್ಲಿ ಅಸುರರ ಸಂಹಾರ ಮಾಡಿ, ಅವರ ಬಂಧನದಲ್ಲಿದ್ದ ಸ್ತ್ರೀಯರನ್ನು ಮುಕ್ತಗೊಳಿಸಿ, ದಾರಿದ್ರ್ಯ, ನಿರಾಸೆ, ವ್ಯಾಕುಲ, ಚಿಂತೆ, ಭಯದಲ್ಲಿ ಸಿಕ್ಕವರಿಗೆ ಸಹಾಯ ಹಸ್ತ ನೀಡಿ, ಸಕಲರಿಗೆ ಆನಂದ ನೀಡುವುದೇ ಶ್ರೀಕೃಷ್ಣನ ಕಾರ್ಯವಾಗಿದೆ ಎಂದು ಜ್ಞಾನಪೀಠ ಪುರಸ್ಕೃತ ಕವಿ ಬೇಂದ್ರೆಯವರು ರೂಪಕದಲ್ಲಿ ಹೇಳಿದ್ದಾರೆ ಎಂದರು.   

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ವಿದ್ವಾನ್ ವಿನಾಯಕ ಭಟ್ ಶೇಡಿಮನೆಯವರು ಮಾತನಾಡುತ್ತ ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೂ ಕೂಡ ಶ್ರೀಕೃಷ್ಣನ ಜೀವನ, ಸಾಧನೆ, ಯೋಚನೆ ಮತ್ತು ಅವನ ತತ್ವಗಳು ಎಲ್ಲದಕ್ಕೂ ಉತ್ತರ ಕೊಡುತ್ತವೆ.  ಕೃಷ್ಣ ಹದಿನಾರು ಸಾವಿರ ಮದುವೆಗಳಾಗಿದ್ದ ಎಂಬ ತಪ್ಪು ಕಲ್ಪನೆಯಲ್ಲಿ ನೋಡುವ ಪರಿಕಲ್ಪನೆ ಇತ್ತೀಚ್ಚೀನ ದಿನಗಳಲ್ಲಿ ಬಂದಿದೆ.   ಕೃಷ್ಣ ಬಾಲ್ಯ ಕಾಲದಲ್ಲಿ ಮಾಡಿದ ಕೆಲಸಗಳಾಗಿರಬಹುದು, ತರುಣನಾಗಿ ಮತ್ತು ಪ್ರೌಢನಾಗಿ ಮಾಡಿರುವ ಸಂಗತಿಗಳು, ವಿಚಾರಗಳು ಸಾಮಾಜಿಕ, ರಾಜಕೀಯ, ತಾತ್ವಿಕ, ನ್ಯಾಯಿಕ ಹಿನ್ನೆಲೆಯಿಂದಿರಬಹುದು ಅವೆಲ್ಲಕ್ಕೂ ಕೂಡ ಶ್ರೀಕೃಷ್ಣ ಮಾದರಿಯಾಗಿದ್ದಾನೆ.  ಭಗವತ್ ಗೀತೆಯ ಮೂಲಕ ಆಯಾ ವೃತಿಗೆ ಪೂರಕವಾಗುವಂತೆ ಕರ್ಮಣ್ಯೇ ವಾದಿಕಾರಸ್ತೇ ಎಂದು ಕರ್ತವ್ಯವೇ ಮುಖ್ಯವಾಗುತ್ತದೆ ಅನ್ನುವುದನ್ನು ಯಾವ ರೀತಿ ಹೇಳಿದ್ದಾನೆ ಎಂಬದಕ್ಕೆ ಕೃಷ್ಣ ಒಂದು ಅದ್ಬುತ ಉದಾಹರಣೆಯಾಗಿದ್ದಾರೆ ಎಂದರು.   

ಸಂಸ್ಕಾರ ಭಾರತಿ ಸಂಘಟನಾ ಪ್ರಮುಖರಾದ ಶ್ರೀನಿವಾಸ ಘೋಷ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಹಿರಿಯ ವಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ, ವಸ್ತವಿನ್ಯಾಸಕಿ ಮುಕ್ತಾ ವೆರ್ಣೇಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೃತ್ಯ ಗುರು ವಿದ್ವಾನ್ ರಾಜೇಂದ್ರ ಟೊಣಪಿ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.    

ರವಿ ಕುಲಕರ್ಣಿ ನಿರೂಪಿಸಿದರು.  ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.  ಡಾ.ಗುರುಬಸವ ಮಹಾಮನೆ ವಂದಿಸಿದರು.   

ನಂತರ ಭರತ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ಗಣೇಶ ಸ್ತುತಿ, ಶಿವಾಷ್ಟಕಂ, ತುಳಸಿದಳ, ಕೃಷ್ಣ ಕೃಷ್ಣ, ಮಳೆ, ಪಂಡರಪುರ ವಿಠ್ಠಲ ಸ್ತುತಿ, ಮುಗಿಲ ಮಾರಿಗೆ,  ಬೂಚಿ ಬೂಚಿ ಬಂದಿದೆ, ಗಣೇಶ ಕೌತುವಂ, ಅರ್ಧನಾರೇಶ್ವರ, ಶ್ರೀ ಕೃಷ್ಣ ಶರಣಂ ಹಾಡುಗಳಿಗೆ ಅತ್ಯಂತ ಮನಮೋಹಕವಾಗಿ ನೃತ್ಯ ಪ್ರದರ್ಶನ ಮಾಡಿದರು.