ಚಾಮರಾಜನಗರ, ಏ.8, ರಾಜ್ಯದಲ್ಲಿ ಇದುವರೆಗೂ 181 ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.ಬುಧವಾರ ಜಿಲ್ಲೆಗೆ ಕೋವಿಡ್-19 ಕುರಿತು ಮಾಹಿತಿ ಪಡೆಯಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸೋಂಕಿನಿಂದ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಗುಣಮುಖರಾಗುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಿಂದ ನಿಜಾಮುದ್ದಿನ್ ಧರ್ಮ ಸಭೆಗೆ ಭಾಗವಹಿಸಿದ್ದವರ ಸಂಖ್ಯೆ 391, ಇವರಲ್ಲಿ 37 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ನಿಜಾಮುದ್ದಿನ್ ಸಭೆಗೆ ಭಾಗವಹಿಸಿದ್ದವರು ದಯಮಾಡಿ ಸಹಕರಿಸಿ, ಸರ್ಕಾರ ನಿಮ್ಮ ಜೊತೆ ಇದೆ. ಇದನ್ನು ಒಂದು ಜಾತಿ, ಧರ್ಮದ ಮೇಲೆ ಗುರುತು ಹಾಕುತ್ತಿಲ್ಲ. ನಿಜಾಮುದ್ದಿನ್ ಸಭೆಯಲ್ಲಿ ಭಾಗವಹಿಸಿದ್ದವರು ಸ್ವಯಂ ಪ್ರೇರಿತವಾಗಿ ಮುಂದೆ ಬನ್ನಿ. ಇದರಿಂದ ಸರ್ಕಾರಕ್ಕೂ ಅನುಕೂಲ ಮಾಡಿದಂತೆ, ಇನ್ನೊಬ್ಬರ ಪ್ರಾಣ ಉಳಿಸಿದಂತೆ ಆಗುತ್ತದೆ ಎಂದು ದೆಹಲಿಯ ಸಭೆಯಲ್ಲಿ ಭಾಗವಹಿಸಿದ್ದ ರಲ್ಲಿ ಸಚಿವರು ಮನವಿ ಮಾಡಿದರು.ಇನ್ನು, ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅಲ್ಲಿ ಈ ಎಲ್ಲಾ ವಿಚಾರಗಳ ಪ್ರಸ್ತಾಪ ಮಾಡುತ್ತೇನೆ. ಕೋವಿಡ್-19ನಿಂದ ಹೊರ ಬರಲು ತಜ್ಞ, ಮುಖ್ಯಮಂತ್ರಿಗಳ ಜೊತೆ ಸೇರಿ ಸಭೆ ನಡೆಸಿ, ಲಾಕ್ಡೌನ್ ವಿಸ್ತರಣೆ ವಿಚಾರವನ್ನು ಚರ್ಚೆ ಮಾಡುತ್ತೇವೆ. ಅಲ್ಲದೇ, ಲಾಕ್ಡೌನ್ ಮುಂದುವರೆಸಬೇಕಾ?…ಬೇಡವೋ ಎಂಬುದನ್ನು ನಾಳೆ ನಿರ್ಧರಿಸುವುದಾಗಿ ಅವರು ತಿಳಿಸಿದರು. ರಾಜ್ಯದ ಪರಿಸ್ಥಿತಿ ಸದ್ಯಕ್ಕೆ ಕಂಟ್ರೋಲ್ನಲ್ಲಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ. ಒಂದು ವೇಳೆ ಬಂದ್ ಮಾಡಿದರೇ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.