ದಾಂಡೇಲಿ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಆಂಬುಲೆನ್ಸ್‌ ವಿಮೆ ಕೊರತೆ

ದಾಂಡೇಲಿ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಆಂಬುಲೆನ್ಸ್‌ ವಿಮೆ ಕೊರತೆ  Shortage of doctors and ambulance insurance at Dandeli ESI Hospital

ದಾಂಡೇಲಿ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಆಂಬುಲೆನ್ಸ್‌ ವಿಮೆ ಕೊರತೆ  

ಕಾರವಾರ 24: ದಾಂಡೇಲಿ ಕಾರ್ಮಿಕರ ನಗರ. ಇಲ್ಲಿನ ಇ.ಎಸ್‌.ಐ ಆಸ್ಪತ್ರೆಗೆ ವೈದ್ಯರ ಕೊರತೆ ಇದೆ.  ಹಾಗೂ ಆಸ್ಪತ್ರೆಗೆ  ಅಗತ್ಯ ಸಿಬ್ಬಂಧಿಗಳು ಸಹ ಇಲ್ಲ.  ಕಾರ್ಮಿಕರ ಸಂಖ್ಯೆ ಹೆಚ್ಚಿರುವ ದಾಂಡೇಲಿ ಕಾರ್ಮಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ  ನೇಮಿಸುವಂತೆ ಕಾರ್ಮಿಕ ಸಚಿವರನ್ನು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ  ಆಗ್ರಹಿಸಿದೆ. ಈ ಸಂಬಂಧ ದಾಂಡೇಲಿ ಸಮಗ್ರ  ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪ  ಕಾರ್ಮಿಕ ಸಚಿವರಿಗೆ ಮತ್ತು ಕಾರ್ಮಿಕ  ಅಧಿಕಾರಿಗಳಿಗೆ  ಲಿಖಿತ ಪತ್ರ ಬರೆದು, ಸಮಸ್ಯೆ ಬಗೆ ಹರಿಸಲು  ಮನವಿ ಮಾಡಿದೆ. ಕಾರ್ಮಿಕ  ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಸಹ  ಕೇಳಿಕೊಂಡಿದ್ದಾರೆ.ಮನವಿಯಲ್ಲಿ ಕೈಗಾರಿಕಾ ನಗರವಾದ ದಾಂಡೇಲಿಗೆ 1969 ರಲ್ಲಿ ಸರ್ಕಾರ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಪ್ರಾರಂಭಿಸಿ ,ಸುಸಜ್ಜಿತ ಕಟ್ಟಡ ನಿರ್ಮಿಸಲಾಯಿತು.30 ಹಾಸಿಗೆ ಆಸ್ಪತ್ರೆಗೆ , ವೈದ್ಯರು ಮತ್ತು  ಸಿಬ್ಬಂದಿಗಳನ್ನು  ನೇಮಕ ಮಾಡಲಾಗಿತ್ತು. ಈ ಆಸ್ಪತ್ರೆಯಲ್ಲಿ   ಸುತ್ತಮುತ್ತಲಿನ ಸುಮಾರು 20 ಸಾವಿರ ಕಾರ್ಮಿಕರ ಕುಟುಂಬಗಳಿಗೆ  ಚಿಕಿತ್ಸಾ ಸೌಲಭ್ಯ ದೊರೆಯುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ  ಕಾರ್ಮಿಕ( ಇಎಸ್ ಐ)  ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ  ಸಂಖ್ಯೆ ಕಡಿಮೆಯಾಗುತ್ತಾ,  ಇದೀಗ ಮುಚ್ಚುವ ಹಂತ ತಲುಪಿದೆ. ಇ.ಎಸ್‌.ಐ. ಆಸ್ಪತ್ರೆಗೆ ಕಾರ್ಮಿಕರ ವೇತನದಿಂದ ಹಣ ಕಡಿತಗೊಳ್ಳುತ್ತಿದ್ದರೂ,  ಇಲ್ಲಿ ಸೌಲಭ್ಯ  ಮಾತ್ರ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಆಸ್ಪತ್ರೆಯಲ್ಲಿದ್ದ  ಕೆಲವರು ವೈದ್ಯರು ನಿವೃತ್ತಿಯಾಗಿದ್ದರೆ  ಹಾಗೂ ಇದ್ದವರು ವರ್ಗಾವಣೆ ಗೊಂಡಿದ್ದು ಅವರ ಖಾಲಿ ಜಾಗೆಯನ್ನು ಸರ್ಕಾರ  ಭರ್ತಿ ಮಾಡಿಲ್ಲ. ವೈದ್ಯರಿಲ್ಲದೇ ಆಸ್ಪತ್ರೆ ಬಣ ಗುಟ್ಟುತ್ತಿದೆ. ಸಿಬ್ಬಂದಿಗಳ  ಸಂಖ್ಯೆ ಇಳಿಮುಖವಾಗಿದೆ.  ಇಎಸ್ ಐ ಆಸ್ಪತ್ರೆಯಲ್ಲಿ  

ಈಗ ಕೇವಲ ಚೀಟಿ ಬರೆದು,  ರೋಗಿಗಳನ್ನು ಧಾರವಾಡ ಮತ್ತು  ಹುಬ್ಬಳ್ಳಿಗೆ ಕಳಿಸಲಾಗುತ್ತಿದೆ.ಆಸ್ಪತ್ರೆಯಲ್ಲಿ ಹೆಸರಿಗೆ ಒಬ್ಬ ವೈದ್ಯರಿದ್ದರೂ ಸಹ ಕಾರ್ಮಿಕರ ಆರೋಗ್ಯ ಪರೀಕ್ಷೆಗೆ  ಸಿಗುತ್ತಿಲ್ಲ.*50 ಲಕ್ಷದ ಅಂಬುಲೆನ್ಸ ಇದೆ- ಬಳಕೆಯಾಗುತ್ತಿಲ್ಲ:*ಇಲ್ಲಿನ ಕಾರ್ಮಿಕ ಆಸ್ಪತೆಯಲ್ಲಿ ವಿಶಾಲವಾದ 30 ಎಕರೆ  ಜಾಗೆ ಇದೆ. ಕಟ್ಟಡದಲ್ಲಿ  ಸೌಲಭ್ಯಗಳಿವೆ. ಇರುವ ಸೌಲಭ್ಯದ ಬಳಕೆಗೆ ಸಿಬ್ಬಂದಿ ವೈದ್ಯರಿಲ್ಲದಂತಾಗಿದೆ.  ಸುಸಜ್ಜಿತ ವಾದ ಸುಮಾರು 50 ಲಕ್ಷ ರೂಪಾಯಿ ಬೆಲೆಯ  ಅಂಬ್ಯು ಲೆನ್ಸ್‌ ಒಂದು ಶೆಡ್ ನಲ್ಲಿ ನಿಲ್ಲಿಸಲಾಗಿದೆ. ಹೊಸ ವಾಹನಕ್ಕೆ ಚಾಲಕನಿಲ್ಲ. ಈ ವಾಹನದ ವಿಮಾ ಹಣ ಕೂಡ ತುಂಬಿಲ್ಲ .  ಇದರಿಂದ ತುರ್ತು ಸಂದರ್ಭದಲ್ಲಿ ವಾಹನ ಬಳಸುವದು ಕಷ್ಟವಾಗಿದೆ. ಕಾರ್ಮಿಕ ಆಸ್ಪತ್ರೆಗೆ  ಎರಡು ವರ್ಷಗಳ ಹಿಂದೆ ಹೊಸ ಎಕ್ಸರೆ ಮಷೀನ್ ಸಹ ಸರ್ಕಾರ ನೀಡಿದೆ. ಮಷೀನ್ ಬಾಕ್ಸ್‌ ಕೂಡ ತೆರೆದಿಲ್ಲ. ಸದ್ಯ ಎಕ್ಸರೆ ಆಪರೇಟರ್ ಇದ್ದರೂ,  ಎಕ್ಸರೆ ಮಷೀನ್ ಉಪಯೋಗಿಸಲು ಇಲಾಖೆಯಿಂದ ಪ್ರಮಾಣ ಪತ್ರ ನೀಡಿಲ್ಲ. ಈ ಕಾರಣ ದಿಂದ ಎಕ್ಸರೆ ತೆಗೆಯಲು ಆಗುತ್ತಿಲ್ಲ.ಇ.ಎಸ್‌.ಐ. ಕಾರ್ಡುದಾರರಿಗೆ ಸದ್ಯಕ್ಕೆ ರಜೆ ವೇತನ ಮತ್ತು ಇನ್ನಿತರ ಓಷಧಿಗಳ ಬಿಲ್ಲುಗಳ ಮರು ಪಾವತಿಯಾಗುತ್ತಿಲ್ಲ. ಕಳೆದ ಮೂರು ತಿಂಗಳಿಂದ ಅಂದಾಜು ಆರು ಲಕ್ಷ ರೂಪಾಯಿ ಕಾರ್ಡುದಾರ ಕಾರ್ಮಿಕರಿಗೆ ನೀಡಬೇಕಾಗಿದ್ದು ಅದನ್ನು ಇದುವರೆಗೂ ನೀಡಿಲ್ಲ. ಹೀಗೆ ಹಲವು ನೂನ್ಯತೆಗಳಿದ್ದು, ಸುಸಜ್ಜಿತವಾದ  ಆಸ್ಪತ್ರೆಯನ್ನು ಮುಚ್ಚುವ ಹುನ್ನಾರ ನಡೆದಿದೆಯೆಂದು ಕಾರ್ಮಿಕರು ಆಪಾದಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಸಮಸ್ಯೆ ವಿವರಿಸಿ ಮನವಿಯನ್ನು ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ. ಇದೇ ರೀತಿಯ ನಿರ್ಲಕ್ಷ ಮುಂದುವರಿದಲ್ಲಿ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಸಮಗ್ರ ಹೋರಾಟ ಸಮಿತಿ  ಎಚ್ಚರಿಸಿದೆ. ಸ್ಥಳೀಯ ಆಸ್ಪತ್ರೆಯ  ಆಡಳಿತಕ್ಕೆ ಮನವಿ ನೀಡುವ  ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮಮ್ಮದ್ ಗೌಸ್ ಬೆಟಗೇರಿ ಉಪಸ್ಥಿತರಿದ್ದರು.