ಶೌಚಾಲಯದಲ್ಲಿದ್ದ ಯುವತಿಯ ಚಿತ್ರೀಕರಣ: ಆರೋಪಿ ಬಂಧನ

ಬೆಂಗಳೂರು, ಜ 30, ಶೌಚಾಲಯಕ್ಕೆ ತೆರಳಿದ್ದ ಯುವತಿಯನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಬುದ್ಧಕಾಂತ್ ದೇಬನಾಥ್ ಬಂಧಿತ ಆರೋಪಿ. ಇದೇ ತಿಂಗಳ 26ರಂದು ರಾತ್ರಿ 8 ರ ಸುಮಾರಿಗೆ ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ನಗರದ ಖಾಸಗಿ ರೆಸ್ಟೋರೆಂಟ್ ವೊಂದಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಊಟದ ಮಧ್ಯೆಯೇ ಯುವತಿ ಮಹಿಳಾ ಶೌಚಾಲಯಕ್ಕೆ ಹೋದಾಗ, ಆಕೆಯನ್ನು ಹಿಂಬಾಲಿಸಿದ ಆರೋಪಿ, ಬಾತ್ ರೂಂ ಮೇಲ್ಭಾಗದಿಂದ ಯುವತಿಯನ್ನು ಚಿತ್ರೀಕರಿಸಿದ್ದನು. ಮೊಬೈಲ್ ನ ಫ್ಲ್ಯಾಶ್‌‌‌ ಬ್ಯಾಕ್ ಆನ್ ಮಾಡಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಗಾಬರಿಯಿಂದ ಹೊರಗೆ ಬಂದು ರೆಸ್ಟೋರೆಂಟ್ ಸಿಬ್ಬಂದಿಗೆ ದೂರು ನೀಡಿದ್ದಳು. ಶೌಚಾಲಯದಲ್ಲಿ ಆ ದಿನ ಮಹಿಳಾ ಸಿಬ್ಬಂದಿ ಇಲ್ಲದಿರುವುದರಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಗುರುತಿಸಿ ಯುವತಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.