140 ಚಕ್ಕಡಿ ಗಾಡಿ, 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗಿ
ಅಥಣಿ 10: ಎಲ್ಲಿ ನೋಡಿದರೂ ಜನವೋ ಜನ, ಖುಶಿಯಿಂದ ಕೆಕೆ ಹಾಕಿ ಉತ್ಸಾಹದಿಂದ ಲಕ್ಷಾಂತರ ಜನ ಕುಣಿದು ಕುಪ್ಪಳಿಸಿದರು. ಮಾಜಿ ಸಚಿವ ಶ್ರೀಮಂತ ಪಾಟೀಲರ 70ನೇ ಜನ್ಮ ದಿನದ ಅಂಗವಾಗಿ ಚಂದ್ರಪ್ಪವಾಡಿಯಲ್ಲಿ ಆಯೋಜಿಸಿದ್ದ ಶಿವನೇರಿ ಕಿತಾಬ ಚಕ್ಕಡಿ ಹಾಗೂ ಕುದುರೆ ಗಾಡಿ ಸ್ಪರ್ಧೆಯ ಸಂದರ್ಭದಲ್ಲಿ ಈ ಸಂಭ್ರಮದ ದೃಶ್ಯ ಕಂಡುಬಂದಿತು. ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗಗಳಿಂದ 140 ಚಕ್ಕಡಿ ಗಾಡಿ ಮತ್ತು 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಹಜಾರೆ ಪಡೆದುಕೊಳ್ಳುವ ಮೂಲಕ ಸ್ಪರ್ಧೆಗೆ ಮತ್ತಷ್ಟು ಉತ್ಸಾಹ ತುಂಬಿದರು.
ಪ್ರಥಮ ಬಹುಮಾನ ಪಡೆದುಕೊಂಡ ಬಾಳು ಹಜಾರೆ ಮಾತನಾಡಿ, ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಎತ್ತಿನ ಗಾಡಿ ಶರ್ಯತ್ತು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸ್ಪರ್ಧಾಳುಗೆ ಎರಡು ಬುಲೆಟ್ ವಾಹನ, ದ್ವಿತೀಯ ಸ್ಥಾನ ಪಡೆದುಕೊಂಡವರಿಗೆ ಎರಡು ಹಿರೋ ಹೊಂಡಾ ಶೈನ ವಾಹನಗಳು ಮತ್ತು ಮೂರನೇ ಸ್ಥಾನ ಪಡೆದುಕೊಂಡವರಿಗೆ ಎರಡು ಎಚ್.ಎಫ್ ಡಿಲಕ್ಸ ವಾಹನಗಳ ಜೊತೆಗೆ ನಗದು ಬಹುಮಾನಗಳನ್ನೂ ಸಹ ಕೊಟ್ಟಿದ್ದಾರೆ ಎಂದರು.
ಜಿ.ಪಂ ಮಾಜಿ ಸದಸ್ಯ ದಾದಾ ಶಿಂಧೆ ಮಾತನಾಡಿ, ಶ್ರೀಮಂತ ಪಾಟೀಲರು ಇಂತಹ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ ಎಂದ ಅವರು ಶರ್ಯತನಲ್ಲಿ ಸೋಲಾಪುರ, ಸಾಂಗಲಿ, ಕೊಲ್ಹಾಪುರ ಸೇರಿದಂತೆ ಅನೇಕ ಜಿಲ್ಲೆಗಳಿಂದ ಭಾಗವಹಿಸಿದ್ದರು ಎಂದು ಹೇಳಿದರು.
ಗ್ರಾಮ ಪಂಚಾಯತ ಸದಸ್ಯ ಬೀರ್ಪ ಉಗಾರೆ ಮಾತನಾಡಿ, ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಹಜಾರೆ ನೇತೃತ್ವದಲ್ಲಿ ನಡೆದ ಎತ್ತಿನ ಗಾಡಿ ಶರ್ಯತ್ತು ಯಶಸ್ವಿಯಾಗಿದೆ ಎಂದ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲರು ಇಂತಹ ಸ್ಪರ್ಧೆಗಳನ್ನು ಆಯೋಜಿಸಿರುವುದು ಅಭಿನಂದನಾರ್ಹ ಸಂಗತಿ ಎಂದರು.
ಬಿಜೆಪಿ ಮುಖಂಡ ಅಭಯ ಅಕ್ಕಿವಾಟೆ ಮಾತನಾಡಿ, ಮಾಜಿ ಸಚಿವ, ಉದ್ಯಮಿ ಶ್ರೀಮಂತ ಪಾಟೀಲ ರಾಜಕೀಯ ಪ್ರವೇಶಿಸಿದ್ದು ಸೇವೆಗಾಗಿ ಹೊರತು ಹಣ, ಅಧಿಕಾರಕ್ಕಲ್ಲ ಎಂದು ಹೇಳಿದ ಅವರು ಅವರ ಕನಸಿನ ಕೂಸು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅವರ ಅಧಿಕಾರವಧಿಯಲ್ಲಿಯೇ ಪೂರ್ಣಗೊಂಡಿತ್ತು ಆದರೆ ಅಂದು ಕೆಲ ಕಾಣದ ಕೈಗಳ ಒಳಸಂಚಿನ ಪರಿಣಾಮ ನೀರು ಹರಿಸಲು ಸಾಧ್ಯವಾಗಲಿಲ್ಲ ಎಂದರು.
ಹಿಂದುಳಿದ ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಗೆ ನೀರಾವರಿ, ಕೆರೆ ತುಂಬುವ, ರಸ್ತೆ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳ ಅಭಿವೃದ್ಧಿಗೆ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಆದರೂ ಚುನಾವಣೆಯಲ್ಲಿ ಅವರನ್ನು ಗುರುತಿಸಲು ನಾವು ವಿಫಲರಾದೆವು ಹೀಗಾಗಿ ಕಾಗವಾಡ ಕ್ಷೇತ್ರ ಮತ್ತೊಮ್ಮೆ ಹಿಂದುಳಿದ ಕ್ಷೇತ್ರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ನಾಗನೂರ ಪಿ.ಎ.ಗ್ರಾಮದ ಬಸಗೊಂಡ ಪಾಟೀಲ ಮಾತನಾಡಿ, ಅಭಿವೃದ್ಧಿಯ ಹರಿಕಾರರು ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಕಾಗವಾಡ ಕ್ಷೇತ್ರ ಅಭಿವೃದ್ಧಿ ಪಥದಲ್ಲಿತ್ತು ಎಂದ ಅವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಶ್ರೀಮಂತ ಪಾಟೀಲರನ್ನು ಆಯ್ಕೆ ಮಾಡುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಸಹಕರಿಸೋಣ ಎಂದರು.
ಒಂದೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಸಕ್ಕರೆ ಕಾರಖಾನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಯೋಗೇಶ ಪಾಟೀಲ, ಡಬಲ್ ಕೇಸರಿ ಪೈಲವಾನ, ಚಂದ್ರಹಾರ ಪಾಟೀಲ, ಅಪ್ಪಾ ಹಜಾರೆ, ದಾದಾ ಶಿಂಧೆ, ದಾದಾ ಪಾಟೀಲ, ಧುರೀಣರಾದ ಶಿವಾನಂದ ಪಾಟೀಲ, ನಾನಸಾಹೇಬ ಅವತಾಡೆ, ಈಶ್ವರ ಕುಂಬಾರೆ, ಡಿ.ಕೆ.ಪವಾರ, ರವಿ ನಾಗ್ಗೊಳ, ಅಪ್ಪಾಸಾಹೇಬ ಮಳಮಳಸಿ, ಆರ್.ಎಮ್.ಪಾಟೀಲ, ಪ್ರವೀಣ ಗುರವ, ರಮೇಶ ನಾನಾಖೋ, ಸುನೀಲ ಖಾಂಡೇಕರ, ಧರೆಪ್ಪ ಹೊನ್ನಾಗೊಳ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.