ಇಂಚಲ ಗ್ರಾಮದ ಶಿವಯೋಗಿಶ್ವರ ಭಜನಾ ತಂಡ ಪ್ರಥಮ

ಇಂಚಲ ಗ್ರಾಮದ ಶಿವಯೋಗಿಶ್ವರ ಭಜನಾ ತಂಡ ಪ್ರಥಮ Shivayogishwar Bhajana Team of Inchala Village wins first place

ಲೋಕದರ್ಶನ ವರದಿ 

ಯಮಕನಮರಡಿ  11:- ರಿಬಿಲ್ಡ್‌ ಇಂಡಿಯಾ ಸಂಸ್ಥೆಯ ಸಹಕಾರದೊಂದಿಗೆ ಮಹಿಳಾ ಕಲ್ಯಾಣ ಸಂಸ್ಥೆಯ “ನಮ್ಮೂರ ಬಾನುಲಿ” ಸಮುದಾಯ ರೇಡಿಯೋ ಕೇಂದ್ರದ ದಶಮಾನೋತ್ಸವದ ಅಂಗವಾಗಿ ಹುಕ್ಕೇರಿ ತಾಲೂಕಿನ ಯಲ್ಲಾಪೂರ-ಕರಗುಪ್ಪಿ ಗ್ರಾಮದ ರೇಡಿಯೋ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಶ್ರೀ ಶಿವಯೋಗಿಶ್ವರ ಭಜನಾ ಮಂಡಳ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಎಂ ಚೌಗಲಾ ಮಾತನಾಡಿ ಇಂತಹ ಸಾಂಸ್ಕೃತಿಕ ಹಾಗೂ ಭಕ್ತಿಪರ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಬೆಳೆಸುವುದರ ಜೊತೆಗೆ ಗ್ರಾಮೀಣ ಸಂಸ್ಕೃತಿ ಉಳಿವಿಕೆಗೂ ಸಹಕಾರಿಯಾಗುತ್ತವೆ ಎಂದರು. 

ಭಜನಾ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನವನ್ನು ಬಾಳೇಶ್ವರ ಭಜನಾ ಮಂಡಳ,ತವಗ ಹಾಗೂ ತೃತೀಯ ಸ್ಥಾನವನ್ನು ದುರದುಂಡೇಶ್ವರ ಭಜನಾ ಮಂಡಳ ಮದಮಕ್ಕನಾಳ ಇವರು ಪಡೆದುಕೊಂಡರು. ಪ್ರಥಮ ಬಹುಮಾನ 10,001/- ರೂ ನಗದು, ದ್ವಿತೀಯ ಬಹಮಾನ 7,001/- ರೂ ನಗದು ತೃತೀಯ ಬಹಮಾನ 5001/-ರೂ ನಗದು ಹಾಗೂ ಪಾರಿತೋಷುಕ ನೀಡಲಾಯಿತು ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಸದಸ್ಯರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.   ಭಜನಾ ಸ್ಪರ್ಧೆಯ ನಿರ್ಣಾಯಕರಾಗಿ ಸಂಗೀತಕಾರ ಅಕ್ಷಯ ಕುಲಕರ್ಣಿ ಹಾಗೂ ತಬಲಾ ವಾದಕರಾದ ಸುಪ್ರೀತ ಲೋಕಾಪೂರ ಆಗಮಿಸಿದ್ದರು.

ಶಕ್ತಿ ಸದನದ ಸಂಯೋಜಕರಾದ ಸುರೇಖಾ ಪಾಟೀಲ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕಿರಣ ಚೌಗಲಾ ಸಿಬ್ಬಂದ್ದಿಗಳಾದ ಶಂಕರ ಕತ್ತಿ ನಮ್ಮೂರ ಬಾನುಲಿ ಸಮುದಾಯ ರೇಡಿರೋ ಕೇಂದ್ರದ ನಿರೂಪಕರಾದ ಆರ ಜೆ ಚೇತನ ಕುಲಕರ್ಣಿ ಹಾಗೂ ಮಹಾಂತೇಶ ಜೋರ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸುಮಾರು 10 ಭಜನಾ ತಂಡಗಳು ಭಾಗವಹಿಸಿ ಭಕ್ತಿಮಯ ವಾತಾವರಣ ನಿರ್ಮಿಸಿದವು 100 ಕ್ಕೂ ಅಧಿಕ ಭಜನಾ ತಂಡದ ಸದಸ್ಯರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.