ಶಿವಶಕ್ತಿ ಶುಗರ್ಸ್‌ನಿಂದ 20 ಲಕ್ಷ ಟನ್ ಕಬ್ಬು ನುರಿಸುವ ಗುರಿ: ಮಲ್ಲಿಕಾರ್ಜುನ ಕೋರೆ

ಶಿವಶಕ್ತಿ ಶುಗರ್ಸ್‌ನಿಂದ 20 ಲಕ್ಷ ಟನ್ ಕಬ್ಬು ನುರಿಸುವ ಗುರಿ: ಮಲ್ಲಿಕಾರ್ಜುನ ಕೋರೆ Shivashakti Sugars aims to crush 20 lakh tonnes of sugarcane: Mallikarjun Kore

ಲೋಕದರ್ಶನ ವರದಿ

ಮಾಂಜರಿ 15: ಈ ವರ್ಷ ಮಳೆಯ ಕೊರತೆಯಿಂದಾಗಿ ಕಬ್ಬು ಉತ್ಪಾದನೆಯಲ್ಲಿ ಇಳಿಕೆಯಾಗುವ ಆತಂಕವಿದ್ದರೂ, ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಶಿವಶಕ್ತಿ ಶುಗರ್ಸ್‌ ಕಾರ್ಖಾನೆಯು ಬರೋಬ್ಬರಿ 20 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಬೃಹತ್ ಗುರಿಯನ್ನು ಹೊಂದಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಅವರು ಸೋಮವಾರರಂದು ರಾಯಬಾಗ ತಾಲೂಕಿನ ಬಾವನ ಸೌಂದತ್ತಿ   ಬಳಿ ಇರುವ, ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ಗೌರವ  ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರ ಒಡೆತನದ ಶಿವಶಕ್ತಿ ಶುಗರ್ಸ್‌ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ  ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.  

ಶಾಸ್ತ್ರೋಕ್ತವಾಗಿ ನೆರವೇರಿದ ಪೂಜಾ ಕೈಂಕರ್ಯಬಾಯ್ಲರ್ ಅಗ್ನಿ ಪ್ರದೀಪನ ಸಮಾರಂಭಕ್ಕೂ ಮುನ್ನ ಸಚಿನ್ ಪಾಟೀಲ್ ದಂಪತಿಗಳು ವೇದಘೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳು ಹಾಗೂ ಹೋಮ-ಹವನಗಳನ್ನು ನೆರವೇರಿಸಿದರು.  

ತದನಂತರ, ಶಿವಶಕ್ತಿ ಶುಗರ್ಸ್‌ನ ಹಿರಿಯ ಅಧಿಕಾರಿ ಬಿ. ಎ. ಪಾಟೀಲ್, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಕಾರ್ಖಾನೆಯ ಇತರೆ ಅಧಿಕಾರಿಗಳು, ರೈತ ಮುಖಂಡರು ಹಾಗೂ ಕೃಷಿ ವಿಭಾಗದ ಸಿಬ್ಬಂದಿಗಳ ಸಮ್ಮುಖದಲ್ಲಿ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅಧಿಕೃತ ಚಾಲನೆ ನೀಡಲಾಯಿತು.