ಕುಲಪತಿ-ಕುಲಸಚಿವರ ನಿರ್ಲಕ್ಷ್ಯಕ್ಕೆ ಅಧ್ಯಾಪಕರ ಆಕ್ರೋಶ

ಕುಲಪತಿ-ಕುಲಸಚಿವರ ನಿರ್ಲಕ್ಷ್ಯಕ್ಕೆ ಅಧ್ಯಾಪಕರ ಆಕ್ರೋಶ  Teachers outraged by the negligence of the Vice-Chancellor and Registrar


ಶಿಗ್ಗಾಂವಿ, ಸೆ.15: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿರುವ 8 ವಿಷಯಗಳನ್ನು ಮರುಸ್ಥಾಪಿಸಬೇಕು ಹಾಗೂ ಕಳೆದ 10 ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ನಡೆಸುತ್ತಿರುವ ಸರಣಿ ಉಪವಾಸ ಸತ್ಯಾಗ್ರಹ ಆರು ದಿನ ಪೂರೈಸಿದೆ.  

ತಿಂಗಳುಗಟ್ಟಲೆ ವೇತನ ಪಾವತಿಸದೆ ಬೋಧನಾ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಅಧ್ಯಾಪಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಆರು ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರು ಪ್ರತಿಭಟನಾಕಾರರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಧ್ಯಾಪಕರು ಆರೋಪಿಸಿದ್ದಾರೆ.  

ವಿಶ್ವವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಡಕವಾಗಿದ್ದು, ಪಠ್ಯ ಚಟುವಟಿಕೆ, ಬೋಧನೆ, ಸಿಲೆಬಸ್ ಹಾಗೂ ವಿಷಯಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಆಡಳಿತ ಮಂಡಳಿ ಕೈಗೊಳ್ಳಬೇಕು. ಆದರೆ, ಪ್ರಮುಖ ವಿಷಯಗಳ ರದ್ದತಿ ಸೇರಿದಂತೆ ಹಲವು ನಿರ್ಧಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.  

ಹೋರಾಟದ ಸಂದರ್ಭದಲ್ಲಿ ಕುಲಸಚಿವರು ವಿಶ್ವವಿದ್ಯಾಲಯದಲ್ಲಿ ಸ್ಥಳೀಯವಾಗಿ ಲಭ್ಯವಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಾತ್ಕಾಲಿಕ ಅಧ್ಯಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿರುವ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು, ಆಡಳಿತ ಮಂಡಳಿ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.