ಬೆಂಗಳೂರು, ನ 12 : ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ ಎಸ್ ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ 'ಆಯುಷ್ಮಾನ್ಭವ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ದ್ವಾರಕೀಶ್ ಚಿತ್ರ ಸಂಸ್ಥೆಗೆ 50 ವರ್ಷ ತುಂಬಿದ್ದು, ಆ ಸಂಸ್ಥೆಯಿಂದ ನಿರ್ಮಾಣವಾಗಿರುವ 52ನೇ ಚಿತ್ರ 'ಆಯುಷ್ಮಾನ್ ಭವ'. ಪಿ ವಾಸು ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಚಿತ್ರ ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಿವರಾಜಕುಮಾರ್, ಅನಂತನಾಗ್, ರಚಿತಾರಾಂ, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.