ಶಿವಕುಮಾರ ಶ್ರೀಗಳ ಮೊದಲ ಪುಣ್ಯತಿಥಿ: ಭಕ್ತರಿಂದ ಗದ್ದುಗೆಗೆ ನಮನ

ತುಮಕೂರು, ಜ 19 :      ತುಮಕೂರು ಸಿದ್ದಗಂಗಾ ಮಠದ ಲೈಂಗೈಕ್ಯ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಿರ್ಮಾಣಗೊಂಡಿರುವ  16 ಕೋಟಿ ರೂ. ವೆಚ್ಚದ 14 ಅಡಿ ಎತ್ತರದ ಸ್ವಾಮೀಜಿ ಅವರ ಪುತ್ಥಳಿಯನ್ನು  ಮುಂದಿನ ತಿಂಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಅನಾವರಣ  ಮಾಡುವರು ಎಂದು ಸಚಿವ ಸೋಮಣ್ಣ ತಿಳಿಸಿದರು.

ತುಮಕೂರಿನ  ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಮೊದಲ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂದೇಶ ವಾಚಿಸಿದರು. 

ನಂತರ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ,  ಇಡೀ ಸಮೂಹವನ್ನು ಮೇಲೆತ್ತಲು ಶಿವಕುಮಾರ ಸ್ವಾಮೀಜಿ ಶ್ರಮಿಸಿದ್ದರು. ಇಂದು ಎಲ್ಲರೂ ಬಸವಣ್ಣನ ಬಗ್ಗೆ ಮಾತನಾಡುತ್ತಾರೆ. ಆದರೆ  ಆ ರೀತಿ ಜೀವಿಸುವುದಿಲ್ಲ. . ಆದರೆ ಶಿವಕುಮಾರ ಸ್ವಾಮೀಜಿ ಜಾತಿ ಮತಗಳನ್ನು ಮೀರಿ ಬೆಳೆದರು. ಅವರ ಒಡನಾಟವನ್ನು ನಮ್ಮ ಬದುಕಿಮ ಶ್ರೇಷ್ಠ ಕ್ಷಣ ಗಳು ಎಂದುಕೊಳ್ಳಬೇಕು.

 ನಾನು ಅಗಾಗ ಮಠಕ್ಕೆ ಭೇಟಿ ನೀಡುತ್ತಿದ್ದೆ. ಸ್ವಾಮಿಗಳು ನಮ್ಮನ್ನು ಬಿಟ್ಟು ಹೋಗಿಲ್ಲ.ಜತೆಯಲ್ಲಿಯೇ ಇದ್ದಾರೆ. ನಾವು ಶರಣರಾದವರು ಜತಿ ಮತಗಳನ್ನು ಮೀರಿ ಬೆಳೆದರೆ ಅದು ನಾವು ಸ್ವಾಮಿಗಳಿಗೆ ಸಲ್ಲಿಸುವ ಸೇವೆ ಎಂದರು. 

ಮತ್ತೋರ್ವ ಸಚಿವ ಸಿ.ಟಿ.ರವಿ, ಮನುಷ್ಯನೇ ದೈವತ್ವಕ್ಕೆ ಏರುವುದನ್ನು ಕಥೆಗಳಲ್ಲಿ ಕೇಳಿದ್ದೇವೆ. ಆದರೆ ಬದುಕಿದ ಕಾಲದಲ್ಲೇ ನಡೆದಾಡುವ ದೇವರು ಎಂದು ಹೆಸರು ಪಡೆದವರು ಶ್ರೀಗಳು. 

ನಾವು ದೇವರನ್ನು ನೋಡಿಲ್ಲ. ಆ ದೇವರಿಗೆ ನಿದರ್ಶನವಾಗಿ ಶ್ರೀಗಳು ಕಾರ್ಯನಿರ್ವಹಿಸಿದ್ದರು. ಋಷಿ ಮುನಿಗಳು  ಎಂದಿಗು ಜಾತಿಮತದ ತಾರತಮ್ಯ ಹೇಳಲಿಲ್ಲ. ಜಾತಿಯಿಂದ ದೈವತ್ವಕ್ಕೆ ಏರಿದ ಉದಾಹರಣೆಗೆ ಪುರಾಣ ಇತಿಹಾಸದಲ್ಲೂ ಇಲ್ಲ ಎಂದರು. 

ಇಂದಿನ ಸಮಾಜದಲ್ಲಿ ಮತ್ತೊಮ್ಮೆ ಸಾಮಾಜಿಕ ಆಂದೋಲನದ ಅವಶ್ಯಕತೆ ಇದೆ. ಜಾತಿಯತೆ ಮತ್ತು  ಅಸ್ಪೃಶ್ಯತೆ ದೂರ ಮಾಡಬೇಕು. ಜಾತ್ಯತೀತರು ಸಹ ಜಾತಿವಾದಿಗಳಾಗಿದ್ದಾರೆ.  ಜಾತ್ಯತೀತ ಎನ್ನುವರು ಜಾತಿ ಮಾಡುತ್ತಾರೆ. ಜಾತಿ ಬಿಟ್ಟರೆ ಅವರ ಅಸ್ತಿತ್ವ ಒರುವುದಿಲ್ಲ. ನಮ್ಮ ಪರಂಪರೆ ವಾರಸುದಾರಿಕೆ ಕಳೆದುಕೊಳಳಬಾರದು ಅಂದರೆ ಮೊದಲು ಜಾತೀಯತೆ ಮತ್ತು ಅಸ್ಪೃಶ್ಯತೆ ಹೋಗಲಾಡಿಸಬೇಕು ಎಂದು ಕರೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ,  ಸಂಸ್ಕಾರ ಎಲ್ಲಿದೆ ಅಂದರೆ ಅದು ಸಿದ್ಧಗಂಗಾ ಮಠದಲ್ಲಿ ಇದೆ. ಸೂರ್ಯ ಚಂದ್ರ ಇರುವವರೆಗೆ ಶ್ರೀಗಳ ಹೆಸರು ಅಜರಾಮರವಾಗಿರುತ್ತದೆ.  ಶಿವಕುಮಾರ ಸ್ವಾಮೀಜಿ ಅವರೇ  ದೊಡ್ಡ ರತ್ನ. ಅವರಿಗೆ ಭಾರತ ರತ್ನ ಏಕೆ ನೀಡಬೇಕು ಎಂದರು. 

ನಾವು ಬಸವಣ್ಣನನ್ನು ನೋಡಲಿಲ. ಆದರೆ ಶ್ರೀಗಳೇ ನಮಗೆ ಬಸವಣ್ಣ. ಜಗತ್ತಿನಲ್ಲಿ ಯಾರೂ ಕೊಡದ ಕೊಡುಗೆಯನ್ನು ಅವರು ನೀಡಿದ್ದಾರೆ. ಸದಾ ಅವರು ನಮ್ಮ ನಡುವೆ ಇರುತ್ತಾರೆ. ಸಿದ್ಧಲಿಂಗ ಸ್ವಾಮೀಜಿ ಸಹ ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 

ಪುಣ್ಯತಿಥಿಯ ಅಂಗವಾಗಿ ಭಾನುವಾರ ಬೆಳಗ್ಗೆ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು.

ಪ್ರಮುಖ  ಶ್ರದ್ಧಾ ಕೇಂದ್ರವಾದ ಶಿವಕುಮಾರ ಶ್ರೀಗಳ ಗದ್ದುಗೆಯ ಹೊರ ಮತ್ತು ಒಳಭಾಗವನ್ನು ಹೂಗಳಿಂದ  ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ನಾಡಿನ ನಾನಾ ಭಾಗದ ಭಕ್ತರು ಗದ್ದುಗೆ ದರ್ಶನಕ್ಕೆ  ಸಾಲುಗಟ್ಟಿ ನಿಂತಿದ್ದರು. ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ  ಮಾಡಲಾಗಿತ್ತು.

ಪುಣ್ಯತಿಥಿಯ ಅಂಗವಾಗಿ ವೀರಗಾಸೆ, ನಂದಿಧ್ವಜ  ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಮೇಳೈಸಿದ್ದವು.  ಮಕ್ಕಳು ನಂದಿ ಧ್ವಜ  ಹಿಡಿದು ಕುಣಿಯುತ್ತಿದ್ದ ದೃಶ್ಯಗಳು ಕಂಡುಬಂದವು.

ಸಂಸ್ಕೃತ  ವೇದ ಪಾಠ ಶಾಲೆ ಎದುರಿನಲ್ಲಿ ಶ್ರೀಗಳ ಮೆರವಣಿಗೆಯ ಆ ಉತ್ಸವದ ಸಾರೋಟಿನ ಬಳಿ ಜನರು  ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕಾರ್ಯಕ್ರಮದಲ್ಲಿ  ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ಮಾಣ  ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಿಜೆಪಿ ಯುವ ಮೋರ್ಚ್ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.