ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಶೀಲಾ ದೀಕ್ಷಿತ್ ಅವರನ್ನು ಎಂದಿಗೂ ಮರೆಯಲಾಗದು ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ
ವಯೋಸಹಜ ಅನಾರೋಗ್ಯ ಸಮಸ್ಯೆಯಿಂದಾಗಿ ಶನಿವಾರ ನಿಧನರಾದ ಶೀಲಾ ದೀಕ್ಷಿತ್ (81) ಪಾರ್ಥವ ಶರೀರದ ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಸೋನಿಯಾ, "ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಓರ್ವ ಹಿರಿಯಕ್ಕನಂತೆ, ಆತ್ಮೀಯ ಗೆಳತಿಯಂತೆ ಆಕೆ ಸದಾ ನನ್ನ ಬೆಂಬಲಕ್ಕಿದ್ದರು ಅವರನ್ನೂ ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್, ಕರಣ್ ಸಿಂಗ್, ರಣದೀಪ್ ಸಿಂಗ್ ಸುರ್ಜವಾಲ, ಪ್ರಿಯಾಂಕಾ ವಾದ್ರಾ, ರಾಜ್ ಬಬ್ಬರ್, ಆರ್ ಜೆಡಿ ಮುಖಂಡ ಮನೋಜ್ ಝಾ ಮೊದಲಾದವರು ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಶೀಲಾ ದೀಕ್ಷಿತ್ ಪಾರ್ಥವ ಶರೀರದ ಅಂತಿಮ ದರ್ಶನ ಪಡೆದರು.
ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮಾಜಿ ಮುಖ್ಯಸ್ಥ ರಾಜ್ ಬಬ್ಬರ್ ಮಾತನಾಡಿ, "ಶೀಲಾ ದೀಕ್ಷಿತ್ ಬಹಳ ಗಟ್ಟಿಗಿತ್ತಿ. ಪಕ್ಷದ ನಿಷ್ಠಾವಂತ ಯೋಧನ ಹಾಗೆ ಕಾರ್ಯನಿರ್ವಹಿಸುತ್ತಿದ್ದರು. ನಾನು ನಾಟಕ ಶಾಲೆಯಲ್ಲಿ ತರಬೇತಿ ಪಡೆದು ಆಗ್ರಾದಲ್ಲಿ ವಿನೋದ್ ದೀಕ್ಷಿತ್ ಅವರ ಜೊತೆ ಕಾರ್ಯನಿರ್ವಹಿಸುವ ದಿನದಿಂದಲೂ ಅವರನ್ನು ಬಲ್ಲೆ ಎಂದರು
ಪಕ್ಷದ ವಕ್ತಾರ ಅಭಿಷೇಕ್ ಮನುಸಿಂಘ್ವಿ ಮಾತನಾಡಿ "ಆಕೆ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಬಯಸುತ್ತಿದ್ದರು ದೆಹಲಿ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಶೀಲಾ ದೀಕ್ಷಿತ್ ಮೊದಲ ಸ್ಥಾನದಲ್ಲಿರುತ್ತಾರೆ" ಎಂದು ಹೇಳಿದರು.
ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನವದೆಹಲಿಯ ಓಖ್ಲಾದ ಫೋರ್ಟಸ್ ಎಸ್ಕಾಟ್ರ್ಸ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೀಲಾ ದೀಕ್ಷಿತ್ ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಶೀಲಾ ದೀಕ್ಷಿತ್ ಅವರು 1998 ರಿಂದ 2013ರ ವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು.
ಮೂರು ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿ ಪ್ರಾಬಲ್ಯ ಹೊಂದಿದ್ದ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಅತ್ಯಾಪ್ತರಾಗಿದ್ದರು.
ಮೃತರ ಗೌರವಾರ್ಥ ದೆಹಲಿಯ ಆಮ್ ಆದ್ಮಿ ಸರ್ಕಾರ 2 ದಿನಗಳ ಶೋಕಾಚರಣೆ ಘೋಷಿಸಿದೆ.