ನವದೆಹಲಿ, ಅ.5: ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಶನಿವಾರ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗುರುವಾರದಿಂದ ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಹಸೀನಾ ಅವರು ಟೀಸ್ತಾ ನದಿ ನೀರು ಹಂಚಿಕೆ ಒಪ್ಪಂದವನ್ನು ಮತ್ತು ಇತರ ಸಾಮಾನ್ಯ ನದಿಗಳ ನೀರನ್ನು ಹಂಚಿಕೊಳ್ಳುವ ಬಗ್ಗೆ ಪ್ರಧಾನಿಯೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಭಾರತ ಮತ್ತು ಬಾಂಗ್ಲಾದೇಶವು ಜನರ ಮಟ್ಟದ ಸಂಪರ್ಕಗಳು, ವ್ಯಾಪಾರ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿವೆ. ಗಡಿಯಲ್ಲಿನ ಕೆಲವು ಚಕಮಕಿಗಳನ್ನು 'ಶೂನ್ಯ'ಕ್ಕೆ ಇಳಿಸಲು ಪ್ರಯತ್ನಿಸುತ್ತಿವೆ.
ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಶುಕ್ರವಾರ, ಉಭಯ ದೇಶಗಳಲ್ಲಿನ ಗಡಿ ಕಾವಲುಗಾರರು ಮತ್ತು ಇಬ್ಬರು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಉಭಯ ಕಡೆಯವರು ಒಟ್ಟಾಗಿ ಮಾಡಿದ ಪ್ರಯತ್ನಗಳಿಂದಾಗಿ, ಇಂತಹ ಘಟನೆಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿವೆ ಎಂದು ಹೇಳಿದ್ದರು.
ಭೂ ಗಡಿ ಒಪ್ಪಂದದ ಆಧಾರದ ಮೇಲೆ ಗಡಿರೇಖೆಯನ್ನು ಅನುಸರಿಸಿ, ಈ ಘಟನೆಗಳನ್ನು ನಾವು ಶೂನ್ಯಕ್ಕೆ ತರಬಹುದೇ ಎಂದು ಚರ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದರು.
ಆದಾಗ್ಯೂ, ಕೆಲವು 'ಪ್ರತ್ಯೇಕ ಘಟನೆಗಳು' ಎರಡೂ ಕಡೆಯಿಂದ ನಡೆದಿರುವುದು ವಿಷಾದನೀಯ. ಆದ್ದರಿಂದ ಎರಡೂ ದೇಶಗಳ ಗಡಿ ಕಾವಲುಗಾರರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಟೀಸ್ತಾ ನೀರಿನ ಹಂಚಿಕೆ ವಿಷಯದ ಬಗ್ಗೆ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಭಾರತದ ನಿಲುವು ಬಾಂಗ್ಲಾದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ತಿಳಿಸಿದರು.
"ಟೀಸ್ತಾ ಹೊರತುಪಡಿಸಿ ಕನಿಷ್ಠ ಏಳು ಇತರ ಗಡಿ ನದಿಗಳಿವೆ" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.