ಮಂಡ್ಯದಲ್ಲಿ ಮತ್ತೆ ಆಪರೇಷನ್ ಕಮಲದ ಕರಿನೆರಳು: ಬಿಜೆಪಿ ಶಾಸಕರ ಪರ ಜೆಡಿಎಸ್ ಶಾಸಕರ ವಕಾಲತ್ತು

oparation kamal

ಮಂಡ್ಯ, ಜ  31- ನಾಲ್ಕನೇ ಸುತ್ತಿನ ಆಪರೇಷನ್ ಕಮಲದ ಬಲೆಗೆ ಮಂಡ್ಯದ ಜೆಡಿಎಸ್ ಶಾಸಕರು  ಬಿದ್ದಿದ್ದಾರೆಯೇ ಎಂಬ ಅನುಮಾನಗಳಿಗೆ ಮಂಡ್ಯ ಜೆಡಿಎಸ್ ಶಾಸಕರೇ ಪುಷ್ಟಿನೀಡಿದ್ದಾರೆ.

ಮೈತ್ರಿ  ಸರ್ಕಾರದ ಪತನಕ್ಕೆ ಕಾರಣವಾಗಿರುವ ಶಾಸಕ ನಾರಾಯಣಗೌಡ ಪರ ಶ್ರೀರಂಗಪಟ್ಟಣ ಶಾಸಕ ರವೀಂದ್ರ  ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡ ವಕಾಲತ್ತು ವಹಿಸಿ, ನಾರಾಯಣಗೌಡರನ್ನು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಸಚಿವರನ್ನಾಗಿಸಬೇಕೆಂದು  ಒತ್ತಾಯಿಸಿದ್ದಾರೆ.

ಸೋತಿರುವ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಅವರನ್ನೂ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ ಎಂದಿದ್ದಾರೆ. ಆ ಮೂಲಕ ತೆನೆಹೊತ್ತ ಮಹಿಳೆಯಿಂದ ಕಮಲದತ್ತ ಒಂದು ಹೆಜ್ಜೆ ಇಟ್ಟಿದ್ದಾರೆ ಎಂಬ ಸಂಶಯ ಮೂಡಿದೆ.

ನಾರಾಯಣಗೌಡ  ಉಪಚುನಾವಣೆಯಲ್ಲಿ ಗೆಲುವು ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡರಿಗೆ ಬಿಜೆಪಿ ಸೇರಲು ಧೈರ್ಯ  ನೀಡಿತ್ತು. ನಾರಾಯಣಗೌಡರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜೆಡಿಎಸ್  ಭದ್ರಕೋಟೆಯೆನಿಸಿದ್ದ ಮಂಡ್ಯದಲ್ಲಿ  ತೆನೆಹೊತ್ತ ಶಾಸಕರ ಪಡೆಯನ್ನು ಸೆಳೆಯಲು  ಯತ್ನಿಸಿತ್ತು. ಬಿಜೆಪಿಗೆ ಶ್ರೀಕಂಠಯ್ಯ, ಸುರೇಶ್‌ಗೌಡ ಸೇರುತ್ತಾರೆ ಎಂದು ಈ ಹಿಂದೆ  ಹೇಳಲಾಗಿತ್ತಾದರೂ ಸದ್ಯಕ್ಕೆ ಪಕ್ಷ ತೊರೆಯುವುದಿಲ್ಲ ಎಂದು ಅವರು  ಸ್ಪಷ್ಟಪಡಿಸಿದ್ದರು.

ಆದರೀಗ ನಾರಾಯಣಗೌಡ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಪಕ್ಷದಿಂದ  ಜಾರಿಕೊಳ್ಳುತ್ತಿದ್ದೇವೆ ಎಂಬ ಸೂಚನೆಯನ್ನು ಇಬ್ಬರೂ ಜೆಡಿಎಸ್ ವರಿಷ್ಠರಿಗೆ  ರವಾನಿಸಿದ್ದಾರೆ. ಈ ಇಬ್ಬರ ಬಹಿರಂಗ ಹೇಳಿಕೆಗಳು ಜೆಡಿಎಸ್ ನಾಯಕರಿಗೆ ಇರುಸುಮುರುಸುಂಟು ಮಾಡಿದೆಯಾದರೂ ದೇವೇಗೌಡ ಹಾಗೂ ಕುಮಾರಸ್ವಾಮಿ ಇನ್ನೂ ಪ್ರತಿಕ್ರಿಯಿಸಿಲ್ಲ.