ಸಕಾಲ ಅನುಷ್ಠಾನದಲ್ಲಿ ಹಿನ್ನಡೆ: ಅಧಿಕಾರಿಗಳಿಗೆ ಸುರೇಶ್ ಕುಮಾರ್ ತರಾಟೆ

ಬೆಂಗಳೂರು,ಜ.14:ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ‘ಸಕಾಲ ಯೋಜನೆ' ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳನ್ನು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ ಸಕಾಲ ಯೋಜನೆ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಸಚಿವರು, ವಿವಿಧ ಸೇವೆಗಳ ಕುರಿತು ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದೇ ಇರುವ ಅಂಕಿಅಂಶಗಳ ಹಿನ್ನೆಲೆಯಲ್ಲಿ ಅಧಿಕಾರಿಗಳ ನೀಡಿದ ಉತ್ತರಗಳನ್ನು ಕೇಳಿ ಸರಿಯಾಗಿ ಕೆಲಸ ಮಾಡಿ ರಾಜ್ಯದ ಜನರಿಗೆ ಸರಿಯಾದ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.         

ಮೊದಲು ಪ್ರತಿಯೊಬ್ಬ ಅಧಿಕಾರಿಗಳು ಸಕಾಲ ಯೋಜನೆಯ ಉದ್ದೇಶ ಮತ್ತು ಮಹತ್ವವನ್ನು ಅರಿಯಬೇಕು. ಅದನ್ನು ಗಮನದ್ಲಲಿರಿಸಿಕೊಂಡು ಸೇವೆಗಳು ಸಕಾಲದಲ್ಲಿ ಜನತೆಗೆ ದೊರೆಯುವಂತಾಗಬೇಕು. ಯಾವುದೇ ಸರ್ಕಾರಿ ಕಚೇರಿಯೂ ಸಕಾಲ ಸೇವೆಯ ನಾಮಫಲಕವಿಲ್ಲದೇ ಇರುವಂತಿಲ್ಲ. ಸಕಾಲದಲ್ಲಿ ಸೇವೆ ದೊರೆಯುವುದು ಸರ್ವರಿಗೂ ಗೊತ್ತಾಗುವಂತಿರಬೇಕು ಎಂದರು.

ತಾನು ಬೆಂಗಳೂರಿನ  ಯಲಹಂಕ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಯಾವುದೇ ವಿಭಾಗದಲ್ಲೂ ಯಾರಿಗೂ ಸಹ ಸಕಾಲ ಯೋಜನೆಯ ವಿಚಾರವೇ ಗೊತ್ತಿರಲಿಲ್ಲ. ಇಂತಹ ಅಧಿಕಾರಿಗಳೂ ರಾಜ್ಯದಲ್ಲಿದ್ದಾರೆ. ಎಷ್ಟೋ ಜನರಿಗೆ ಸಕಾಲ ಬೋರ್ಡ್ ಹಾಕಬೇಕೆಂಬ ಕುರಿತು ಮಾಹಿತಿಯೇ ಇಲ್ಲ, ಇದು ಸಕಾಲ ಯೋಜನೆಯ ಉದ್ದೇಶವನ್ನೇ ತಲೆಕೆಳಗು  ಮಾಡುವಂತಿದೆ ಎಂದರು.  ಇನ್ನು ಪ್ರತಿ ತಿಂಗಳೂ ಜಿಲ್ಲಾಧಿಕಾರಿಯವರು ಸಕಾಲ ಯೋಜನೆ ಕುರಿತು ತಮ್ಮ ವ್ಯಾಪ್ತಿಯ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅರ್ಜಿಗಳ ವಿಲೇವಾರಿ ಕುರಿತು ವ್ಯಯಕ್ತಿಕ ಗಮನ ಹರಿಸಬೇಕು. ಪ್ರತಿ ತಿಂಗಳೂ ಸಕಾಲ  ಕುರಿತಂತೆ  ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆ ಮೂಲಕ ಸಂಬಂಧಿಸಿದ ಅಧಿಕಾರಿಗಳನ್ನು ಎಚ್ಚರಿಸಬೇಕು. ವಿಶೇಷವಾಗಿ ಜಿಲ್ಲಾ ಮತ್ತು ತಾಲೂಕು  ಮಟ್ಟದಲ್ಲಿ ಸಕಾಲ ಯೋಜನೆ ಕುರಿತು ಅಧಿಕಾರಿಗಳು ಹಾಗ ಸಂಬಂಧಿಸಿದ ನೌಕರರಿಗೆ ಜಾಗೃತಿ ಮೂಡಿಸಲು ಹಾಗೂ ವಿಲೇವಾರಿ ಕುರಿತಂತೆ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಏರ್ಪಡಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು. 

ಇನ್ನು ಮುಂದೆ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸ್ವೀಕರಿಸುವುದನ್ನೂ ಸಹ ಆನ್ ಲೈನ್ ಮಾಡಲಾಗುತ್ತಿದ್ದು, ಮುಖ್ಯಮಂತ್ರಿಯವರಿಂದ ಸೂಕ್ತ ದಿನಾಂಕ ದೊರೆತ ತಕ್ಷಣವೇ ಅಂದರೆ ಫೆಬ್ರವರಿ ಮೊದಲ ವಾರದಲ್ಲಿಯೇ ಅದನ್ನು ಆರಂಭಿಸಲಾಗುವುದು ಎಂದೂ ಸಚಿವರು ತಿಳಿಸಿದರು. ಸಕಾಲ ಯೋಜನೆಯನ್ವಯ ಅರ್ಜಿ ವಿಲೇವಾರಿ ಮಾಡುವುದನ್ನು ಇನ್ನಷ್ಟು ಸರಳೀಕರಿಸುವ ಉದ್ದೇಶವಿದ್ದು, ಈ ಕುರಿತು ಸಲಹೆ ಸೂಚನೆಗಳನ್ನು ನೀಡಬಹುದೆಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಒಟ್ಟಾರೆ ಸಾರ್ವಜನಿಕ ಕೆಲಸಗಳು ಯಾವುದೇ ರೀತಿಯ ಗೊಂದಲ, ವಿಳಂಬವಾಗದೇ ಗುಣಾತ್ಮಕವಾಗಿ ದೊರೆಯುವಂತಾಗಬೇಕು. ಆಗಲೇ ಸಕಾಲ ಯೋಜನೆ ಉದ್ದೇಶ ಸಾಧನೆಯಾಗುವುದು ಎಂದು ಅವರು ಹೇಳಿದರು.  

ಕೆಲ ಜಿಲ್ಲೆಗಳಲ್ಲಿ ಗುಣಾತ್ಮಕ ವಿಲೇವಾರಿಯಾಗದಿರುವುದು, ಅರ್ಜಿಗಳ ಶೂನ್ಯ ಸ್ವೀಕಾರ, ಸಕಾಲ ಬೋರ್ಡ್ ಇಲ್ಲದಿರುವುದು, ತಿರಸ್ಕೃತ ದರ ಏರಿಕೆಯಾಗದಿರುವುದು ಸೇರಿದಂತೆ ಹಲವಾರು ವಿಭಾಗಗಳಲ್ಲಿ ತೀವ್ರ ಹಿನ್ನಡೆಯಾದ ಜಿಲ್ಲೆಗಳ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾರಿಗೆ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಾಧನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳ ಅರ್ಜಿಗಳ  ವಿಲೇವಾರಿಯಲ್ಲಿನ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಚಾಲನಾ ಪ್ರಮಾಣ  ಪತ್ರಗಳ ನವೀಕರಣದ ಕುರಿತು ಹಾರಿಕೆ ಉತ್ತರ ನೀಡಿದ  ಸಹಾಯಕ  ಸಾರಿಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಈ ಕುರಿತಂತೆ ವಯಕ್ತಿಕ ಗಮನ ಹರಿಸಿ ನಾಳೆಯೇ ಸಂಬಂಧಿಸಿದ ಅರ್ಜಿಗಳನ್ನು  ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಸೂಚಿಸಿದರು. 

ಕೆಲ  ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ನಿಗದಿತ ಅವಧಿ ನಂತರವೂ ಅರ್ಜಿಗಳನ್ನು ವಿಲೇವಾರಿ ಮಾಡಿರಲಿಲ್ಲ. ಇಂತಹ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳು ಅಗತ್ಯ ಗಮನ ಹರಿಸಬೇಕೆಂದರು.

ಈ ಸಂದರ್ಭದಲ್ಲಿ ಈ-ಆಡಳಿತ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಅಪರ ಮಿಷನ್ ನಿರ್ದೇಶಕ ಡಾ. ಸುನೀಲ್ ಪಂವಾರ್, ಸಕಾಲ ಮಿಷನ್ ನಿರ್ದೇಶಕ ವರಪ್ರಸಾದ ರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.