ದೇಶ ಸೇವೆಯೇ ಈಶ ಸೇವೆ: ಕೃಷ್ಣಾ ಕೊಳ್ಳಾನಟ್ಟಿ

ದೇಶ ಸೇವೆಯೇ ಈಶ ಸೇವೆ: ಕೃಷ್ಣಾ ಕೊಳ್ಳಾನಟ್ಟಿ Serving the country is serving Isha: Krishna Kollanatti

ಧಾರವಾಡ 01: ದೇಶ ಸೇವೆಯೆ ಈಶ ಸೇವೆ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಭಾರತೀಯನು ದೇಶದ ಬಗ್ಗೆ ಭಕ್ತಿ, ಅಭಿಮಾನದಿಂದ ಬದುಕಬೇಕು. ಯಾವುದೇ ಜಾತಿಯವನಿರಲಿ, ಯಾವುದೇ ಧರ್ಮದವರಿರಲಿ ಪ್ರತಿಯೊಬ್ಬರು ಭಾತೀಯರು ಎಂಬ ಧ್ಯೇಯದೊಂದಿಗೆ ಬದುಕಬೇಕು. ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದು ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಹೇಳಿದರು.  

ಅವರು ಧಾರವಾಡ ಸಂಗೀತ ವರ್ಷಿಣಿ ಕಲಾ ಸಂಸ್ಥೆಯ ವತಿಯಿಂದ ಧಾರವಾಡ ರಂಗಾಯಣದಲ್ಲಿ ಆಯೋಜಿಸಿದ್ದ ಹಿಂದಿ ಮತ್ತು ಕನ್ನಡ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.  

ಸಂಗೀತ ವರ್ಷಿಣಿ ಕಲಾ ಸಂಸ್ಥೆಯವರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾದ ವೀಣಾ ಪತ್ತಾರ ಅವರು. ತಮ್ಮನ್ನು ತಾವು ಸಾಂಸ್ಕೃತಿಕ ಸಂಗೀತ, ಕಲೆ ಇವುಗಳ ಸೇವೆಗೆ ಅರ​‍್ಿಸಿಕೊಂಡಿದ್ದಾರೆ. ಇವರು ಆಯೋಜಿಸುವ ಕಾರ್ಯಕ್ರಮಗಳು ದೇಶದ ಅಭಿಮಾನವನ್ನು ಬಿಂಬಿಸುವ ಹಾಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬನಲ್ಲಿರುವ ಅಡಗಿರುವ ಕಲೆಯನ್ನು ಹೊರಹಾಕಲು ಕರೊಕೆ ಮಾಧ್ಯಮದಿಂದ ಸಂಗೀತ ಸೇವೆಯನ್ನು ಮಾಡುತ್ತಿದ್ದಾರೆ. ಹೊಸಬರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದರು.  

ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಧಾರವಾಡದ ಮಧುವಂತಿ ಮಹಿಳಾ ಮಂಡಳ ಪ್ರಥಮ ಸ್ಥಾನ, ಗಾನ ಸಿಂಚನಾ ಮಹಿಳಾ ಮಂಡಳ ದ್ವಿತೀಯ ಸ್ಥಾನ ಹಾಗೂ ಭೂಮಿಕಾ ಮಹಿಳಾ ಮಂಡಳ ತೃತೀಯ ಸ್ಥಾನ ಪಡೆದರು. ತುಂಗಭದ್ರಾ ಮಹಿಳಾ ಮಂಡಳ ಹಾಗೂ ಕಲ್ಯಾಣ ಸಖಿ ಬಳಗದವರು ಸಮಾಧಾನಕರ ಬಹುಮಾನ ಹಂಚಿಕೊಂಡರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ನೀಡಲಾಯಿತು.  

ಕ್ಲಿಷ್ಟಕರ ಸಂದರ್ಭದಲ್ಲೂ ಅತ್ಯುತ್ತಮವಾಗಿ ನಿರ್ಣಯವನ್ನು ತೆಗೆದುಕೊಂಡು ನಿರ್ಣಾಯಕರು ಹಾಗೂ ಮುಖ್ಯ ಅತಿಥಿಗಳಾದ  ಧಾರವಾಡದ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ ಹಾಗೂ ಗದಗದ ಗಾನಯೋಗಿ ಪಂಚಾಕ್ಷರ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ್ ಉತ್ತಮರಲ್ಲಿ ಉತ್ತಮರನ್ನು ಆಯ್ಕೆ ಮಾಡಿರುವುದು ಶ್ಲಾಘನೀಯವಾಗಿದೆ. ಧಾರವಾಡ ಗುಂಗರಗಟ್ಟಿ ಅರಣ್ಯಾಧಿಕಾರಿ ಬಸವರಾಜ ಪಟ್ಟದಕಲ್ಲು ಮತ್ತು ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮುಖ್ಯಅತಿಥಿಯಾಗಿ ಮಾತನಾಡಿದರು. 

ಧಾರವಾಡ ಹೆಸ್ಕಾಂದ ನಿವೃತ್ತ ಇಂಜೀನೀಯರರು ಹಾಗೂ ಸಂಗೀತಗಾರರಾದ ಹೆಚ್‌. ವಿ. ದಾಸರ ಮಾತನಾಡಿ, ಸಂಗೀತ ವರ್ಷಿಣಿ ಸಂಸ್ಥೆಯವರು ಮಹಿಳಾ ಮಂಡಳಗಳಿಗೆ ದೇಶ ಭಕ್ತಿಗೀತೆ ಗಾಯನ ಸ್ಪರ್ಧೆಯನ್ನು ಆಯೋಜಿಸಿ, ಎಲ್ಲರಲ್ಲಿ ದೇಶಭಕ್ತಿಯನ್ನು ಮೂಡಿಸಿದ್ದಾರೆ. ಇಲ್ಲಿ ಬಂದಂತ ಸುಮಾರು 20ಕ್ಕೂ ಹೆಚ್ಚು ತಂಡಗಳು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಹಾಡಿದ್ದಾರೆ. ಒಂದು ಹಾಡು ಹಾಡಬೇಕೆಂದರೆ ಅದರ ಹಿಂದಿನ ತಯಾರಿ ಬಹಳ ಕಠಿಣವಾಗಿರುತ್ತದೆ. ನಿರ್ಣಾಯಕರಿಗೂ ಸಹ ನಿರ್ಣಯ ಕೊಡುವುದು ಇಂತಹ ಪರಿಸ್ಥಿತಿಯಲ್ಲಿ ಬಹಳ ಕಠಿಣ. ಹೀಗೆ ಮುಂದಿನ ದಿನಮಾನಗಳಲ್ಲಿ ಧಾರವಾಡದಲ್ಲಿರುವ 300ಕ್ಕೂ ಹೆಚ್ಚು ಮಹಿಳಾ ತಂಡಗಳು ಉತ್ಸುಕತೆಯಿಂದ ಭಾಗವಹಿಸಬೇಕು ಮತ್ತು ಈ ಕಾರ್ಯಕ್ರಮ ಮೂರುದಿನದವರೆಗೆ ನಡೆಯಬೇಕೆಂದು ಕಿವಿಮಾತು ಹೇಳಿದರು.  

ವೀಣಾ ಪತ್ತಾರ ಸ್ವಾಗತಿಸಿದರು. ಪ್ರಹ್ಲಾದ ಕಡೇಚೂರ ನಿರೂಪಿಸಿದರು. ಮಾರುತಿ ಬಡವಣ್ಣವರ ವಂದಿಸಿದರು.  

ಕಾರ್ಯಕ್ರಮದಲ್ಲಿ ಅನಂತ ಪತ್ತಾರ, ಲಲಿತಾ ಬೆಟಗೇರಿ ಸೇರಿದಂತೆ ಮಹಿಳಾ ಮಂಡಳದವರು, ಕಲಾವಿದರು ಭಾಗವಹಿಸಿದ್ದರು.