ಕರಾವಳಿಗೆ ಪ್ರತ್ಯೇಕ ಮರಳು ನೀತಿ, ಮುಳುಗಿ ಮರಳು ತೆಗೆಯಲು ಅವಕಾಶ: ಸಿ.ಸಿ.ಪಾಟೀಲ್

ಬೆಂಗಳೂರು, ಮಾ.20, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಲಾಗುವುದು ಮತ್ತು ನೀರಿನಲ್ಲಿ ಮುಳುಗಿ ಮರಳು ತೆಗೆಯಲು ಅವಕಾಶ ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಗಣಿಗಾರಿಕೆ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಕರಾವಳಿ ಭಾಗದ ಶಾಸಕರಾದ ಸಂಜೀವ್ ಮಠಂದೂರು, ಸುನೀಲ್  ಕುಮಾರ್, ಯು.ಟಿ.ಖಾದರ್ ಕೇಳಿದ ಪ್ರಶ್ನೆ ಹಾಗೂ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದಾಗ  ಕರಾವಳಿ ಭಾಗದಲ್ಲಿ ವಿಭಿನ್ನತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಿಆರ್‌ಝಡ್  ಸಮಸ್ಯೆಯನ್ನು ಬಗೆಹರಿಸಲಾಗಿದೆ. ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮುಳುಗಿ ಮರಳು  ತೆಗೆಯಲು ಅವಕಾಶ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಈಗಾಗಲೇ ನಮ್ಮ ರಾಜ್ಯದ  ಅಧಿಕಾರಿಗಳ ಒಂದು ತಂಡವನ್ನು ಗುಜರಾತ್‌ಗೆ ಕಳುಹಿಸಿತ್ತು. ಈ ಸಮಿತಿ ಅಧ್ಯಯನ ನಡೆಸಿ ವರದಿ  ನೀಡಿದೆ. ಅದರಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಅಂತಿಮ ತೀರ್ಮಾನ  ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಸಜೀವ್ ಮಠಂದೂರು ಮಾತನಾಡಿ, ಕರಾವಳಿ ಭಾಗದಲ್ಲಿ ಪ್ರಕೃತಿ ದತ್ತವಾದ ಮರಳನ್ನು ಉಪಯೋಗ ಮಾಡಲು ಆಗುತ್ತಿಲ್ಲ. ಕಳೆದ ಎರಡು ಬಾರಿಯ ಮಳೆಗಾಲದಲ್ಲಿ ಪ್ರವಾಹ ಬಂತು. ಮರಳಿನ ಸಮಸ್ಯೆಯಿಂದಾಗಿ ನೆರೆ ಬಂದಿದೆ. ಕರಾವಳಿಗೆ ಹೊಸ ಮರಳು ನೀತಿ ತರಬೇಕು ಎಂದರು.ಮಳೆಗಾಲಕ್ಕೆ ಇನ್ನು ಎರಡು ತಿಂಗಳು ಮಾತ್ರ ಉಳಿದಿದೆ. ಮಳೆ ಬಂದ ಮೇಲೆ ನೀರು ನಿಲ್ಲುತ್ತದೆ. ಪ್ರಾಕೃತಿಕ ವಿಕೋಪದಿಂದ ಮರಳು ಬಂದು ಬಿದ್ದಿದ್ದರೆ ಮರಳು ತೆಗೆಯಲು ಅವಕಾಶ ನೀಡಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಒಂದು ಕೆ.ಜಿ.ಮರಳನ್ನು ಆಟೋದಲ್ಲಿ ಕೊಂಡೊಯ್ಯಲೂ ಪೊಲೀಸರು ಬಿಡುತ್ತಿಲ್ಲ. ದುಬೈ ಅಥವಾ ಗಲ್ಫ್ ದೇಶಗಳಿಂದ ಒಂದು ಕೆ.ಜಿ.ಬಂಗಾರವನ್ನು ಆರಾಮವಾಗಿ ತರುತ್ತಾರೆ. ಆದರೆ ಒಂದು ಕೆ.ಜಿ.ಮರಳು ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಮರಳು ಕೊಂಡೊಯ್ಯಲು ಅಡೆತಡೆ ಮಾಡುತ್ತಿದೆ ಎಂದು ಆಪಾದಿಸಿದರು.ಸುನೀಲ್ ಕುಮಾರ್ ಮಾತನಾಡಿ, ಸಿಆರ್‌ ಝಡ್ ಮತ್ತು ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ  ಮರಳು ತೆಗೆಯಲು ಅವಕಾಶ ನೀಡಬೇಕು. ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ಕೊಡಬೇಕು.  ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸಬೇಕು. ಮರಳು  ತೆಗೆಯುವ ವ್ಯಾಪ್ತಿಯನ್ನು ಒಂದೂವರೆ ಹೆಕ್ಟೇರ್ 2 ಹೆಕ್ಟೇರ್‌ಗೆ ನಿಗದಿ ಎಂಬ  ನಿಯಮವನ್ನು ಕನಿಷ್ಠ 25 ಸೆಂಟ್ಸ್‌ ವ್ಯಾಪ್ತಿಗೆ ಇಳಿಸಬೇಕು. ಹಾಗಾದರೆ ನಮ್ಮ ಜಿಲ್ಲೆಯ  ಮರಳು ಸಮಸ್ಯೆ ಪರಿಹಾರವಾಗಲಿದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ಕರಾವಳಿಯಲ್ಲಿ ಮರಳು ತೆಗೆಯಲು ಟೆಂಡರ್ ವಿನಾಯಿತಿ, ಕರಾವಳಿಯಲ್ಲಿ ಏರಿಯಾ ನಿಗದಿಯನ್ನು ಕಡಿಮೆ ಮಾಡುವ  ಬಗ್ಗೆಯೂ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಈ ಮಧ್ಯೆ ಮಾತನಾಡಲು ಯು.ಟಿ.ಖಾದರ್ ಎದ್ದು ನಿಂತಾಗ ಸ್ಪೀಕರ್ ಅವರು ಅವಕಾಶ ನೀಡದೆ, ಮುಂದಿನ ಪ್ರಶ್ನೆಯನ್ನು ಕೈಗೆತ್ತಿಕೊಂಡರು. ಇದರಿಂದ ಆಕ್ರೋಶಗೊಂಡ ಯು.ಟಿ.ಖಾದರ್  ಸದನದ ಬಾವಿಗಿಳಿದು ಧರಣಿಗೆ ಮುಂದಾದರು.ಇದರಿಂದ  ಕೋಪಗೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಪ್ರಶ್ನೋತ್ತರ ಅವಧಿ. ನೀವು ಸಚಿವರಾಗಿ ಕೆಲಸ ಮಾಡಿದವರು. ಈಗಾಗಲೇ ಎರಡು ಉಪ ಪ್ರಶ್ನೆ ಕೇಳಲಾಗಿದೆ. ಈ ರೀತಿ ಮಾಡುವುದು ಸರಿಯಲ್ಲ. ನಾನು ಉದಾರಿಯಾದುದರಿಂದ ಈ ರೀತಿ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು.
 ಮರಳು ಸಮಸ್ಯೆ ಬಗ್ಗೆ ಅರ್ಧ ಗಂಟೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಲು ಜಗದೀಶ್ ಶೆಟ್ಟರ್ ಹಾಗೂ ಇತರ ಸದಸ್ಯರು ಸಲಹೆ ನೀಡಿದರು. ಅದರಂತೆ ಸ್ಪೀಕರ್ ಅವರು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಬಳಿಕ ಖಾದರ್ ಧರಣಿ ಕೈಬಿಟ್ಟು ತಮ್ಮ ಆಸನಕ್ಕೆ ತೆರಳಿದರು.