ಕನ್ನಡದ ಹಿರಿಯ ವಿದ್ವಾಂಸ ಡಾ. ಬಸವರಾಜ ಜಗಜಂಪಿ

ಕನ್ನಡ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆಯೇ ಬದುಕಿ, ಸಾಹಿತ್ಯ ಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದವರು ಡಾ.ಬಸವರಾಜ ಜಗಜಂಪಿ. ಜನಪದ ಹಾಡು, ನುಡಿ, ಒಗಟು, ವಡವು ಅವರ ಬಾಯಿಯಿಂದಲೇ ಕೇಳಬೇಕು. ಜನಪದವನ್ನು ಕುರಿತು ಅಧಿಕೃತವಾಗಿ ಹೇಳಬಲ್ಲರು, ಹಾಡಬಲ್ಲರು, ನಾಡಿನಲ್ಲಿ ಕನ್ನಡಿಗರಿಗೆ ಅಭಿಮಾನ, ಆತ್ಮಸ್ಥೆರ್ಯ ತುಂಬಿ, ಕನ್ನಡದ ಜೀವಂತಿಕೆಗೆ ಪಾತ್ರರಾದವರು. 

ಬಸವರಾಜ ಜಗಜಂಪಿ ಅವರ ಪೂರ್ವಜರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದವರು. ಬಸವರಾಜ ಅವರು 1950ರ ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪ, ತಾಯಿ ಈರಮ್ಮ. ವರ್ತಕರ ಮನೆತನದಲ್ಲಿ ಬೆಳೆದ ಬಸವರಾಜರು ಬೆಳಗಾವಿಯ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಎಸ್‌.ಎಸ್‌.ಎಲ್‌.ಸಿ.ಯನ್ನು 1966ರಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಬೆಳಗಾವಿಯ ಪ್ರತಿಷ್ಠಿತ ಲಿಂಗರಾಜ ಕಾಲೇಜಿನಿಂದ ಪದವಿಯನ್ನು ಪೂರೈಸಿದ ಅವರು ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ 1972ರಲ್ಲಿ ಪಡೆದರು. ಅಲ್ಲದೇ ಧರ್ಮಗಳ ತೌಲನಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾವನ್ನು ಪಡೆದಿರುವದು ವಿಶೇಷ. ಅವರು 1989ರಲ್ಲಿ ‘ಗರುಡ ಸದಾಶಿವರಾಯರು’ ಪ್ರೌಢ ಪ್ರಬಂಧವನ್ನು ಡಾ.ಎಸ್‌.ಎಸ್‌.ಕೋತಿನ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪಿಹೆಚ್‌.ಡಿ. ಪದವಿಯನ್ನು ಪಡೆದರು. 

ಡಾ.ಬಸವರಾಜ ಜಂಗಜಂಪಿ ಅವರು ತಾವು ಅಧ್ಯಯನ ಮಾಡಿದ ಕೆ.ಎಲ್‌.ಇ. ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿಯೇ 1972ರಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅವರು ನಿಪ್ಪಾಣಿ, ಸವದತ್ತಿ ಹಾಗೂ ಹುಬ್ಬಳ್ಳಿಗಳಲ್ಲಿ ಸೇವೆಸಲ್ಲಿಸಿ, 2004ರಲ್ಲಿ ಪದೋನ್ನತಿ ಪಡೆದು ಪ್ರಾಂಶುಪಾಲರಾಗಿ ಲಿಂಗರಾಜ ಕಾಲೇಜಿಗೆ ಬಂದರು. ಅವರು ಮೇ 2008ರಲ್ಲಿ ಸೇವಾ ನಿವೃತ್ತಿಯನ್ನು ಹೊಂದಿದರು. ಡಾ.ಜಗಜಂಪಿ ಅವರ ಪಾಠಶೈಲಿ ಎಲ್ಲಿರಿಗೂ ಅಚ್ಚುಮೆಚ್ಚು. ಅವರ ಮಾರ್ಗದರ್ಶನದಲ್ಲಿ 5 ವಿದ್ಯಾರ್ಥಿಗಳು ಪಿಹೆಚ್‌.ಡಿ. ಪದವಿಯನ್ನು ಪಡೆದಿರುವರು. ಪಿಹೆಚ್‌.ಡಿ. ಸಂಶೋಧನೆ ಪ್ರಬಂಧಗಳ ಮೌಲ್ಯಮಾಪಕರಾಗಿ ಡಾ.ಜಗಜಂಪಿಯವರು ಕಾರ್ಯನಿರ್ವಹಿಸಿರುವರು. ಅಲ್ಲದೇ ಐ.ಎ.ಎಸ್‌. ಕೆ.ಎ.ಎಸ್‌. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿದ್ಯಾಥಿಗಳಿಗೆ ಉಚಿತ ತರಬೇತಿ ನೀಡಿರುತ್ತಾರೆ. ಅವರಿಂದ ಸ್ಫೂರ್ತಿ ಪಡೆದ ಅನೇಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಅವರು ಮಾದರಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಕನ್ನಡ ನಾಡು ನುಡಿಯ ಬಗ್ಗೆ ಅವರಿಗಿರುವ ಅಭಿಮಾನ, ಕಾಳಜಿ ಅಗಾಧವಾದದ್ದು. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಡಾ. ಬಸವರಾಜ ಜಗಜಂಪಿ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳ ಬಗೆಗಿನ ಅವರ ಸ್ಮರಣ ಶಕ್ತಿ ಮತ್ತು ವಿದ್ವತ್ತುಗಳು ಸದಾ ಕಾಲಕ್ಕೂ ಬೆರಗು ಹುಟ್ಟಿಸುವಂಥವು. ಸೃಜನಶೀಲ ನೆಲೆಯಲ್ಲಿ ಗುರುತಿಸಿಕೊಂಡ ಜಗಜಂಪಿಯವರು ಪಾಂಡಿತ್ಯ, ಸತತ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ನಾಡಿನ ವಿದ್ವಜ್ಜನರಲ್ಲಿ ಪ್ರಸಿದ್ಧರೆನಿಸಿಕೊಂಡಿದ್ದಾರೆ. 

ಡಾ.ಜಗಜಂಪಿಯವರು ಪ್ರಬಂಧ, ಸಂಶೋಧನೆ, ವ್ಯಕ್ತಿ ಚಿತ್ರಣ, ವಿಮರ್ಶೆ, ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಿಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಕನ್ನಡ ಕಾಯಕ ಯೋಗಿ ಡಾ.ಶಿವಬಸವ ಸ್ವಾಮಿಜಿ, ಕವಿ ಸಿದ್ಧ ನಂಜೇಶ, ಬಸವರಾಜ ಹೊಸಮನಿ, ಬಿ.ಎಂ.ಸಾಣಿಕೊಪ್ಪ, ಬಸವ ಪ್ರಭಪ್ಪ ಹಂಪಣ್ಣವರ, ಕೆ.ಎಲ್‌.ಇ. ಸಂಸ್ಥೆ ಭಾವೈಕ್ಯಮೇರು, ರಂಗಪಯಣ, ಬಸವ ಪ್ರಸಾದ, ಬೆಳಕಿನತ್ತ, ಸಾಧನೆಯತ್ತ, ಗರುಡ ಸದಾಶಿವರಾಯರು, ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳು, ಎಸ್‌.ಜಿ.ಕಲ್ಲೂರ, ಬೇಂದ್ರೆ ಕಾವ್ಯವೈಖರಿ, ಏಣಗಿ ಬಾಳಪ್ಪನವರು ಮತ್ತು ಬಸವಣ್ಣನ ಪಾತ್ರ, ಯುರೋಪ ಸಾಂಸ್ಕೃತಿಕ ಸೌರಭ, ಶೇಗುಣಸಿ ಮುರುಘೇಂದ್ರ ಸ್ವಾಮಿಗಳು ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಅಲ್ಲದೇ 15ಕ್ಕೂ ಹೆಚ್ಚು ಕೃತಿಗಳನ್ನು ಅವರು ಸಂಪಾದಿಸಿದ್ದಾರೆ. ಮಲ್ಲಿಕಾರ್ಜುನ ದರ್ಶನ, ಅರಳು, ಗುರುಕಾರುಣ್ಯ, ನೂರುಬಣ್ಣ ನೂರು ಬಿಂಬ, ರಸಾಯನ, ಫ.ಗು.ಹಳಕಟ್ಟಿ ಸಂಪಾದಿತ ಸಮಗ್ರ ಸಂಪುಟ ಭಾಗ-2, ಗುಣಾರ್ಣವ ಡಾ.ಜಿನದತ್ತ ದೇಸಾಯಿ, ಹಿಂದಣ ಹೆಜ್ಜೆ, ಸ್ಫಂದನ, ಬೆಳಗಲಿ, ಶ್ರೀ ಗುರು, ಕನ್ನಡ ಚೇತನ, ಹೊನ್ನಹೆಜ್ಜೆ, ನಂಬಿಕೆಗಳು, ಸಾಹಿತ್ಯ ಭೂಷಣ, ಅನನ್ಯ ಸಾಧಕ ಸಂಪಾದಿತ ಕೃತಿಗಳಾಗಿವೆ. ‘ಬೆಳಕಿನತ್ತ’ ಕೃತಿಯು ಆಕಾಶವಾಣಿಯಲ್ಲಿ ಪ್ರಸಾರಗೊಂಡ 50 ಚಿಂತನಗಳ ಸಂಕಲನದ ರೂಪವಾಗಿದೆ. ‘ಅನನ್ಯ ಸಾಧಕ’ ಸಂಪಾದಿತ ಕೃತಿಯು ಡಾ.ಪ್ರಭಾಕರ ಕೋರೆಯವರ ಅಮೃತ ಮಹೋತ್ಸವದ ಅಭಿನಂದನ ಗ್ರಂಥವಾಗಿದೆ. 

ಡಾ.ಬಸವರಾಜ ಜಗಜಂಪಿಯವರು ನಾಡಿನ ಹಲವಾರು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅವರು 2009 ರಿಂದ 2012ರವರೆಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕವಿ ಎಸ್‌.ಡಿ.ಇಂಚಲ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾಗಿ ಹದಿನೈದು ವರ್ಷಗಳವರೆಗೆ, ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರಾಗಿ, 2004 ರಿಂದ 2006ರವರೆಗೆ ಬೆಳಗಾವಿ ಜಿಲ್ಲಾ ಎನ್‌.ಎಸ್‌.ಎಸ್‌. ನೋಡಲ್ ಅಧಿಕಾರಿಯಾಗಿ, 2008 ರಿಂದ 2012ರವರೆಗೆ ಕೆ.ಎಲ್‌.ಇ. ಸ್ವತಂತ್ರ ವಿಶ್ವವಿದ್ಯಾಲಯದ ಗ್ರಂಥಾಲಯಗಳ ಆಡಳಿತ ಅಧಿಕಾರಿಯಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕಿನ ಘಟಕದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಪ್ರಶಸ್ತಿಗಳಾದ ಬಸವ ಪುರಸ್ಕಾರ, ಕನಕಶ್ರೀ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ 2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿ ಯಶಸ್ಸಿಗೆ ಕಾರಣೀಭೂತರಾಗಿರುವರು. ಅವರು ಅಥಣಿಯಲ್ಲಿ 2015ರಲ್ಲಿ ಜರುಗಿದ ಬೆಳಗಾವಿ ಜಿಲ್ಲಾ 10ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮತ್ತು 2016ರಲ್ಲಿ ಹಾರೋಗೇರಿಯಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಪಡೆದಿರುವರು. 

ಪ್ರವಾಸವನ್ನು ಅತಿಯಾಗಿ ಇಷ್ಟಪಡುವ ಡಾ.ಬಸವರಾಜ ಜಗಜಂಪಿಯವರು ಭಾರತದ ಪ್ರಮುಖ ರಾಜ್ಯಗಳಿಗೆ, ಅಮೇರಿಕಾಕ್ಕೆ ಮೂರು ಬಾರಿ, ನೇಪಾಳ, ದುಬೈ ಮತ್ತು ಯುರೋಪ ದೇಶಗಳನ್ನು ಖಾಸಗಿಯಾಗಿ ಸುತ್ತಿ ಬಂದಿದ್ದಾರೆ. ಅವರ ಹದಿನಾಲ್ಕು ದಿನಗಳಲ್ಲಿ ಯುರೋಪಿನ ಎಂಟು ದೇಶಗಳಾದ ಲಂಡನ್, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಜರ್ಮನಿ, ಸ್ವಿಝರ್‌ಲ್ಯಾಂಡ್, ಇಟಲಿ ಮತ್ತು ವ್ಯಾಟೀಕನ್ ಸಿಟಿ ಸುತ್ತಿ ಬಂದ ತಮ್ಮ ಅನುಭವಗಳನ್ನು ‘ಯುರೋಪ ಸಾಂಸ್ಕೃತಿಕ ಸೌರಭ’ ಕೃತಿಯಲ್ಲಿ ತಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ. ಪ್ರವಾಸ ಕಥನಗಳಲ್ಲಿ ಆಸಕ್ತಿ ಇರುವವರು, ಆ ಮೂಲಕ ಯುರೋಪ ಪ್ರವಾಸದ ಬಗ್ಗೆ ತಿಳಿದುಕೊಳ್ಳ ಬಯಸುವವರಿಗೆ ಇದು ಒಂದು ಮಾರ್ಗದರ್ಶಕ ಕೃತಿಯಾಗಿದೆ. ಅಲ್ಲದೇ ಈ ಕೃತಿಯು 2021ರ ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿರುವದು ಸಂತಸದ ಸಂಗತಿ. ಡಾ.ಶಿವಬಸವ ಸ್ವಾಮಿಜಿಯವರು ಬೆಳಗಾವಿಯಲ್ಲಿನ ಕನ್ನಡಿಗರಿಗೆ ಅಭಿಮಾನ, ಆತ್ಮಸ್ಥೆರ್ಯ ತುಂಬಿ, ಕನ್ನಡದ ಜೀವಂತಿಕೆಗೆ ಪಾತ್ರರಾದವರು. ಶ್ರೀಗಳು ‘ಮಾತು ಬೆಳ್ಳಿ ಮೌನ ಬಂಗಾರ’ ವೆಂಬಂತೆ ಕೆಲಸ ಮಾಡಿದವರು. ಅವರ ಕುರಿತು ಜಗಜಂಪಿಯವರು ರಚಿಸಿದ ‘ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ’ ಕೃತಿಯು ನಾಲ್ಕು ಸಲ ಮುದ್ರಣಗೊಂಡಿರುವದು ಸಾಹಿತ್ಯ ಲೋಕದಲ್ಲಿ ಅಪರೂಪದ ಸಂಗತಿ. 

ಪ್ರಥಮವಾಗಿ ನಮಗೆ ಆಕರ್ಷಿಸುವದು ಡಾ.ಬಸವರಾಜ ಜಗಜಂಪಿ ಅವರ ಸರಳ ಹಾಗೂ ನಿರಾಡಂಬರ ವ್ಯಕ್ತಿತ್ವ. ಅವರ ನಡೆನುಡಿಯಲ್ಲಿ, ಉಡುಗೆತೊಡುಗೆಯಲ್ಲಿ, ಮೃದುವಾದ ಮುಗುಳ್ನಗೆಯಲ್ಲಿ ಪರಿಶುಭ್ರತೆಯಿಂದ ಕೂಡಿದ ಆದರ ಗೌರವಗಳನ್ನು ಕಾಣಬಹುದು. ಅವರು ಶರಣ ಚಿಂತನೆ, ಅಧ್ಯಯನವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ. ಅವರು ನಾಡಿನ ವಿವಿಧ ವೇದಿಕೆಗಳಲ್ಲಿ ಸಾವಿರಾರು ಉಪನ್ಯಾಸಗಳನ್ನು ನಿರರ್ಗಳವಾಗಿ ನೀಡಿ ಸಮಾಜದಲ್ಲಿ ಮಾದರಿಯಾಗಿದ್ದಾರೆ. 2016ರಲ್ಲಿ ಅವರು ವೀರಶೈವ ಸಮಾಜವು ಆಯೋಜಿಸಿದ ಉತ್ತರ ಅಮೇರಿಕಾದ ಚಿಕಾಗೋದಲ್ಲಿಯ ಗ್ರೇಟರ್ ಹಿಂದೂ ಟೆಂಪಲ್‌ದಲ್ಲಿ ಮೂರು ವಿಶೇಷ ಉಪನ್ಯಾಸಗಳನ್ನು ನೀಡಿರುವದು ವಿಶೇಷವಾಗಿದೆ. ಡಾ.ಜಗಜಂಪಿಯವರು ಪತ್ನಿ ಸುಷ್ಮಾ, ಮಗ ಲಿಂಗರಾಜ, ಸೊಸೆ ನೇಹಾ, ಮಗಳು ಅಮೃತಾ, ಅಳಿಯ ಶಶಿಧರ, ಮೊಮ್ಮಕ್ಕಳಾದ ಸಿಂಚನ, ದೀಕ್ಷಾ, ಧನವಿನ್‌ರೊಂದಿಗೆ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ. ಅವರ ಪತ್ನಿ ಸುಷ್ಮಾರವರು ಲೇಖಕಿಯಾಗಿದ್ದು, ಎಂಟು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಮಗ ಎಂ.ಬಿ.ಎ. ಪದವೀಧರರಾಗಿದ್ದು, ಬೆಳಗಾವಿಯಲ್ಲಿ ಉದ್ಯಮಿಯಾಗಿದ್ದಾರೆ. ಮಗಳು ಮತ್ತು ಅಳಿಯ ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿದ್ದಾರೆ. 

ಡಾ.ಬಸವರಾಜ ಜಗಜಂಪಿಯವರು ಸಲ್ಲಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಆರಸಿಕೊಂಡು ಬಂದಿವೆ. ಬಸವತತ್ವ ಪರಿಪಾಲಕ, ನಾಡೋಜ ಸಮ್ಮಾನ, ಮಂತ್ರಾಲಯ ರಾಘವೇಂದ್ರ ಶ್ರೀ ಪರಮಳ ಪ್ರಶಸ್ತಿ, ಚನ್ನಶ್ರೀ ಪ್ರಶಸ್ತಿ, ಅಂತರಾಷ್ಟ್ರೀಯ ಜೈಂಟ್ಸ್‌ ಪ್ರಶಸ್ತಿ, ಆಜೂರೆ ಪ್ರತಿಷ್ಠಾನದ ಪ್ರಶಸ್ತಿ, ಬೆಳಗಾವಿ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, 2021ರಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಪ್ರೊ.ಪ್ರಹ್ಲಾದಕುಮಾರ ಭಾಗೋಜಿ ಅವರ ಹೆಸರಿನಲ್ಲಿ ‘ಜೀವಮಾನ ಸಾಧನೆಗೆ’ ಸಮ್ಮಾನ ಹೀಗೆ ನಾಡಿನ ಮಠ ಮಾನ್ಯಗಳ, ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜರಾಗಿದ್ದಾರೆ. 

ಡಾ.ಬಸವರಾಜ ಜಗಜಂಪಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಹುಮುಖವಾಗಿದ್ದು, ವಿಭಿನ್ನ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಅವರದು ಶಾಂತ ಸ್ವಭಾವದ ವ್ಯಕ್ತಿತ್ವ, ಅವರ ಸಾಹಿತ್ಯಿಕ ಸಾಧನೆಗೆ ಅವರಲ್ಲಿರುವ ಸರಳ ಸಜ್ಜನಿಕೆಯ ಸ್ವಭಾವ, ನಿರಂತರ ಅಧ್ಯಯನಶೀಲತೆ, ಸದಾ ಚಟುವಟಿಕೆಯಿಂದಿರುವ ವ್ಯಕ್ತಿತ್ವವೇ ಕಾರಣವಾಗಿದೆ. ಅವರ ಬದುಕು-ಬರಹ ನಮಗೆಲ್ಲ ಸ್ಫೂರ್ತಿದಾಯಕವಾಗಲಿ. ಸಂಪರ್ಕಿಸಿ: 9480398426. 

- * * * -