ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕಳುಹಿಸಿ; ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮನವಿ

ವಾಷಿಂಗ್ಟನ್, ಏ ೫, ಅಮೆರಿಕಾ  ಅಧ್ಯಕ್ಷ ಡೊನಾಲ್ಡ್ ಟ್ರಂಪ್,  ಭಾರತ ಪ್ರಧಾನಿ ನರೇಂದ್ರ  ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿ  ಕೊರೊನಾ ವೈರಾಣುವಿಗೆ  ಪ್ರತಿಬಂಧಕ  ಔಷಧಿಯಾಗಿ  ಬಳಸಲಾಗುತ್ತಿರುವ  ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು  ಅಮೆರಿಕಾಗೆ ರಫ್ತು ಮಾಡುವಂತೆ  ಡೊನಾಲ್ಡ್  ಟ್ರಂಪ್,  ಪ್ರಧಾನಿ ಮೋದಿ ಅವರನ್ನು  ಕೋರಿದ್ದಾರೆ. ಅಮೆರಿಕಾ  ಕೋರಿರುವ  ಪ್ರಮಾಣದಷ್ಟು   ಔಷಧಿ  ರವಾನಿಸುವಂತೆ  ಮೋದಿ ಅವರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
 ಕೊರೊನಾ ವೈರಸ್    ವಿರುದ್ದ   ಕಠಿಣ ಕ್ರಮಗಳ ಭಾಗವಾಗಿ  ವಿದೇಶಗಳಿಂದ  ಸರಕುಗಳ ಆಮದು  ಹಾಗೂ  ರಫ್ತು  ಮಾಡುವುದನ್ನು   ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ.  ಹೈಡ್ರಾಕ್ಸಿಕ್ಲೋರೋಕ್ವಿನ್  ಮಲೇರಿಯಾ ಮತ್ತು ರುಮಟಾಯ್ಡ್  ಆರ್ಥರೈಟಿಸ್ ಚಿಕಿತ್ಸೆ  ಬಳಸಲಾಗುತ್ತಿದೆ.  ಕ್ಲಿನಿಕಲ್ ಆಗಿ  ಈ ಔಷಧಿ  ಇನ್ನೂ  ರುಜುವಾತಾಗಿಲ್ಲವಾದರೂ ಕೋವಿಡ್ -೧೯ ವೈರಸ್ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ.ಕೊರೊನಾ ವೈರಸ್ ತಡೆಗಟ್ಟಲು  ಪ್ರತಿಬಂಧಕ ಔಷಧಿಯಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈಗಾಗಲೇ ಅನುಮೋದನೆ ನೀಡಿದೆ. ಏತನ್ಮಧ್ಯೆ, ಅಮೆರಿಕಾದಲ್ಲಿ ಕೊರೊನಾ ವೈರಸ್  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು,  ಎಂಟು ಸಾವಿರಕ್ಕೂ  ಹೆಚ್ಚು ಮಂದಿ    ಸಾವನ್ನಪ್ಪಿದ್ದಾರೆ.