ಬೆಂಗಳೂರು, ಫೆ. 27:ಪಿಇಎಸ್ ವಿಶ್ವವಿದ್ಯಾಲಯದಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಪ್ರೊ.ಸಿಎನ್ ಆರ್ ರಾವ್ ಮತ್ತು ಪ್ರೊ.ಎಂ ಆರ್ ಡಿ ವಿದ್ಯಾರ್ಥಿ ವೇತನ ಪ್ರಶಸ್ತಿ ಸಮಾರಂಭವನ್ನು ಫೆ.29 ರಂದು ಆಯೋಜಿದ್ದು 4362 ಮೆರಿಟ್ ವಿದ್ಯಾರ್ಥಿಗಳಿಗೆ ಒಟ್ಟು 5.7 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಸಂಸ್ಥಾಪಕ ಡಾ.ಎಂ.ಆರ್ ದೊರೆಸ್ವಾಮಿ ತಿಳಿಸಿದ್ದಾರೆ.
ನಗರದ ಸೆಂಚುರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಪೂರ್ವಭಾವಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಿದ್ಯಾರ್ಥಿ ವೇತನ ಕಾರ್ಯಕ್ರಮ ವಿಶ್ವವಿದ್ಯಾಲಯದ ಎಂಆರ್ ಡಿ ಸಭಾಂಗಣದಲ್ಲಿ ನಡೆಯಲಿದ್ದು, ಸಿಸ್ಕೋ ಭಾರತ ಮತ್ತು ಎಸ್ ಎಎಆರ್ ಸಿ ಅಧ್ಯಕ್ಷ ಸಮೀರ್ ಗಾರಡೆ ಹಾಗೂ ಅಕ್ಸೆಂಚರ್ ಸುಧಾರಿತ ತಂತ್ರಜ್ಞಾನ ಕೇಂದ್ರದ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೇಖರ್ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿ.ವಿಯ ಸಮಕುಲಾಧಿಪತಿ ಪ್ರೊ.ಡಿ.ಜವಹರ್ ವಹಿಸಲಿದ್ದಾರೆ. ಈ ಸಾಲಿನಲ್ಲಿ 4362 ಮೆರಿಟ್ ವಿದ್ಯಾರ್ಥಿಗಳಿಗೆ ಒಟ್ಟು 5.7 ಕೋಟಿ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.
ವಿಶ್ವವಿದ್ಯಾಲಯದಲ್ಲಿ ಫೆ.5 ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಅಭಿಮಾನ ಬೆಳೆಸುವುದು ಇದರ ಉದ್ದೇಶವಾಗಿದೆ. ನಾಡಿನ ಸಂಸ್ಕೃತಿ ತಿಳಿಸುವ ಸಲುವಾಗಿ ಮಾರ್ಚ್ 5 ,6 ಮತ್ತು 7 ರಂದು ಆತ್ಮತೃಷ, ಯಕ್ಷಗಾನ, ಸಂಗೀತ ಸಮರ್ಪಣಂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿಶೇಷ ಅತಿಥಿಗಳಾಗಿ ಯಕ್ಷಗಾನ ಕಲಾವಿದ ಡಾ.ಕೆರೆಮನೆ ಶಿವಾನಂದ ಹೆಗಡೆ, ಹೆಸರಾಂತ ಹಾಲಿವುಡ್ ಗಾಯಕ ಬೆನ್ನಿ ದಯಾಳ್ ಮುಂತಾದ ಹೆಸರಾಂತ ಕಲಾವಿದರಿಂದ ಆಗಮಿಸಲಿದ್ದು, ಮನರಂಜನೆಯ ರಸದೌತಣ ಸವಿಸಲಿದ್ದಾರೆ ಎಂದರು.