ಸದ್ದು ಮಾಡಿದ ಮಹೇಶ್ ಕುಮಟಹಳ್ಳಿ ವಿರುದ್ಧ ಸವದಿ ಅವಹೇಳನಕಾರಿ ಹೇಳಿಕೆ

ಬೆಂಗಳೂರು, ಸೆ 27: ಅಥಣಿ ಮತಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಹಳ್ಳಿ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅಪಮಾನಕರ ಹೇಳಿಕೆ ನೀಡಿದ್ದಾರೆ ಎನ್ನಲಾದ ದೃಶ್ಯದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಲಕ್ಷ್ಮಣ್ ಸವದಿಯ ಇರುಸುಮುರುಸಿಗೆ ಕಾರಣವಾಗಿದೆ. 

ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಮುಂಜಾನೆ "ಕುಮಟಹಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೇಡಿ" ಎಂಬ ಸವದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ  ಸಂಬಂಧ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಟಹಳ್ಳಿ, ಸವದಿ ಅವರು ಆಡಿರುವ ಮಾತಿನಿಂದ ತಮ್ಮ ಮನಸ್ಸಿಗೆ ಬೇಜಾರು ಮತ್ತು ನೋವಾಗಿದೆ. ಅವರು ಹೀಗೆ ಮಾತನಾಡಬಾರದಿತ್ತು. ಆದರೆ ಏಕೆ ಹೀಗೆ ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು. 

ವಿಷ ಕೊಟ್ಟರೂ ಅದು ಅಮೃತವಾಗಲಿ ಎಂದು ಬಯಸುವ ಗುಣ ತಮ್ಮದು. ಹೀಗಾಗಿ ಲಕ್ಷ್ಮಣ್ ಸವದಿ ಅವರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. 

ತಮ್ಮ ಹೇಳಿಕೆಯನ್ನು ಸಮಥರ್ಿಸಿಕೊಂಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ತಪ್ಪಾಗಿ ಮಾತಾಡಿಲ್ಲ. ತಾವು ಮಾತನಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಎಂಬುವರಿಗೆ ಸಂಬಂಧಿಸಿದ್ದು. ಎರಡು ತಿಂಗಳ ಹಿಂದೆ ಅದು ಮಾತಾಡಿದ್ದು ಈಗ ವೈರಲ್ ಆಗಿದೆ. ಈ ಹೇಳಿಕೆಗೂ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದು ತಮ್ಮ ಮತ್ತು ಮಹೇಶ ಕುಮಟಳ್ಳಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ. ಚುನಾವಣಾ ಸಂದರ್ಭವಾಗಿರುವುದರಿಂದ ಇದರ ಲಾಭ ಪಡೆಯಲು ಪ್ರಯತ್ನ ಮಾಡಿದ್ದಾರೆ. ಅನರ್ಹ ಶಾಸಕರಾಗಿರುವ ಮಹೇಶ್ ಕುಮಟಳ್ಳಿ ಜೊತೆಗೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ನೀಡಿದರು