ಸಂಗೀತಲೋಕದ ಸವ್ಯಸಾಚಿ ಪಂ.ಚಂದ್ರಶೇಖರ ಪುರಾಣಿಕಮಠ

ದೈವದತ್ತ ಸುಮಧುರ ಕಂಠದ ಪಂ.ಚಂದ್ರಶೇಖರ ಪುರಾಣಿಕಮಠರು ಬಾಲಪ್ರತಿಭೆಯಾಗಿ ಸಂಗೀತಕ್ಷೇತ್ರಕ್ಕೆ ಬಂದರು. ಐದು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಗಾಯಕರಾಗಿ ಹಾಗೂ ತುಂಬಾ ಅಪರೂಪದ ಗುರುಗಳಾಗಿ ಸಂಗೀತ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯ ಹಾಗೂ ವಿಶಿಷ್ಟವಾದದ್ದು. ಪಂ.ಪುರಾಣಿಕಮಠರವರ ನಿಜವಾದ ಆಸಕ್ತಿಯೆಂದರೆ ಅವರ ಶಿಷ್ಯಬಳಗ. ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಾರ್ಥಕ ಜೀವಿ, ಸಜ್ಜನಗಾಯಕರು ಪಂ.ಚಂದ್ರಶೇಖರರು.  

ಪಂ.ಚಂದ್ರಶೇಖರರು ಹಾವೇರಿಯಲ್ಲಿ ಡಿಸೆಂಬರ್2, 1926ರಂದು ಜನಿಸಿದರು. ತಂದೆ ಪ್ರಭಯ್ಯ ಶಾಸ್ತ್ರಿ, ತಾಯಿ ಗಂಗಮ್ಮ. ಅವರು ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಸಂಗೀತದ ಗೀಳನ್ನು ಹಚ್ಚಿಕೊಂಡಿದ್ದರು. ಅದು ಎಷ್ಟರಮಟ್ಟಿಗೆ ಇತ್ತೆಂದರೆ ಶಾಲೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಗ್ರಾಮೋಫೋನದಿಂದ ಪಂ.ಡಿ.ವಿ.ಪಲುಸ್ಕರ್‌ ಅವರ ಹಿಂದೂಸ್ತಾನಿ ಗಾಯನ ಹರಿದು ಬರುತ್ತಿತ್ತು. ಆ ಸಂಗೀತವನ್ನು ಆಲಿಸುತ್ತ ತನ್ಮಯರಾಗಿ ಅಲ್ಲಿಯೇ ನಿಂತುಬಿಡುತ್ತಿದ್ದರು. ಇದನ್ನು ಗಮನಿಸಿದ ಕೀರ್ತನಕಾರರಾದ ಅವರ ತಂದೆಯವರು ಚಂದ್ರಶೇಖರರನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪದ್ಮವಿಭೂಷಣ ಪಂ.ಪುಟ್ಟರಾಜ ಗವಾಯಿಗಳಲ್ಲಿ ಸಂಗೀತ ಕಲಿಯಲು ಸೇರಿಸಿದರು. ಚಂದ್ರಶೇಖರರು ಗುರುಕುಲದಲ್ಲಿ ಶೃದ್ಧೆಯಿಂದ ಸಂಗೀತ ಕಲಿತರು. ನಂತರ ಚಂದ್ರಶೇಖರರು ಅವರ ಹಿರಿಯಣ್ಣ ಪಂ.ಮೃತ್ಯುಂಜಯ ಬುವಾ ಪುರಾಣಿಕಮಠರಲ್ಲಿ ಹತ್ತು ವರ್ಷಗಳವರೆಗೆ ಸಂಗೀತದಲ್ಲಿ ತಾಲೀಮು ನಡೆಸಿದರು. ಮುಂದೆ ಎರಡು ವರ್ಷಗಳವರೆಗೆ ಗ್ವಾಲಿಯರ್ ಫರಾಣಾದ ದಿಗ್ಗಜರಾದ ಪಂಢರಾಪುರದ ಪಂ.ಜಗನ್ನಾಥ ಬುವಾ ಪಂಢರಪುರಕರ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು. ಪಂ.ಚಂದ್ರಶೇಖರ ಪುರಾಣಿಮಠರವರು ಗ್ವಾಲಿಯರ್ ಫರಾಣಾದ ಹಿರಿಯ ಗಾಯಕರಾಗಿ ಪ್ರಸಿದ್ಧಿ ಪಡೆದರು.  

ಪಂ.ಚಂದ್ರಶೇಖರರು ಸಂಗೀತ ಶಿಕ್ಷಣವನ್ನು ಇಷ್ಟೆಲ್ಲ ಶೃದ್ಧೆಯಿಂದ ಕಲಿತರೂ, ಅವರು ಅದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ವೃತ್ತಿಯಿಂದ ಅವರು ಹಾವೇರಿಯಲ್ಲಿ ಸಾಬೂನು ಕಾರ್ಖಾನೆಯನ್ನು ನಡೆಸುತ್ತಿದ್ದರು. ತಮ್ಮದೇ ಕಾರ್ಖಾನೆಯಲ್ಲಿ ತಯಾರಾದ ಸಾಬೂನುಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ವಿತರಿಸುತ್ತಿದ್ದರು. ವ್ಯಾಪಾರದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿದ್ದರು. ಆವಾಗಲೇ ಪಂ.ಚಂದ್ರಶೇಖರರು ಶಾಂತಮ್ಮ ಅವರನ್ನು ಮದುವೆಯಾದರು. ಪಂ.ಚಂದ್ರಶೇಖರರು ಬಿಡುವಿಲ್ಲದ ಸಮಯದಲ್ಲೂ ಅವರು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಎರಡು ತಾಸುಗಳವರೆಗೆ ಸಂಗೀತಾಭ್ಯಾಸ ಮಾಡಿಯೇ ಉದ್ಯೋಗದಲ್ಲಿ ತೊಡಗುತ್ತಿದ್ದರು. ಸಾಗರ, ಶಿರ್ಸಿ, ಸಿದ್ಧಾಪುರ, ರಾಣಿಬೆನ್ನೂರ, ದಾವಣಗೆರೆ ಮುಂತಾದ ಕಡೆಗಳಲ್ಲಿ ವ್ಯಾಪಾರದಿಂದಾಗಿ ಅವರಲ್ಲಿರುವ  ಸಂಗೀತ ಕಲೆಯೂ ಅನೇಕರಿಗೆ ಪರಿಚಯವಾಯಿತು.  

ಪಂ.ಚಂದ್ರಶೇಖರರಿಗೆ ವಿಧಿಯ ಆಟವೇ ಬೇರೆಯೇ ಆಗಿತ್ತು. ಅವರು ಸಂಕಷ್ಟಗಳ ಸರಮಾಲೆಯಲ್ಲಿ ಸುತ್ತಿಕೊಂಡರು. ಸಾಬೂನು ಕಾರ್ಖಾನೆ ನಷ್ಟವನ್ನು ಅನುಭವಿಸಿತು. ವಿಚಿತ್ರವೆಂದರೆ ಯಾರೋ ಮಾಡಿದ ತಪ್ಪಿಗೆ ಸಾಲ ತೀರಿಸಲು ಸ್ವಂತ ಮನೆಯನ್ನೆ ಮಾರಾಟ ಮಾಡಿದರು. ಸಂಸಾರ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡಲಾರಂಭಿಸಿದರು. ಈ ಸಮಯದಲ್ಲಿ ಹತ್ತಿರದ ಸಂಬಂಧಿಕರು ದೂರವಾದರು. ಆದರೆ ಸಂಗೀತ ಪ್ರೇಮಿಗಳು ಹತ್ತಿರವಾದರು. ಮುಂದೆ ಸಂಗೀತವನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿದರು. ಅವರಿಗೆ ಸಂಗೀತ ಪಾಠವೇ ವೃತ್ತಿಯಾಯಿತು. ಪಂ.ಚಂದ್ರಶೇಖರರು 1962ರಲ್ಲಿ ಶಿರ್ಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡರು. ಈ ಸಮಯದಲ್ಲಿ ಅವರು ಉತ್ತರಕನ್ನಡದ ಅನೇಕ ಸಂಗೀತಾಸಕ್ತರ ಪ್ರೀತಿಗೆ ಪಾತ್ರರಾದರು.  

ಪಂ.ಚಂದ್ರಶೇಖರರು ಶಿರ್ಸಿಯಲ್ಲಿ ಮೂರು ವರ್ಷಗಳವರೆಗೆ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಹಾವೇರಿಯಲ್ಲಿ 1965ರಿಂದ 1975ರವರೆಗಗೆ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಪಂ.ಚಂದ್ರಶೇಖರರಿಗೆ ಆಕಾಶವಾಣಿ ಧಾರವಾಡ ನಿಲಯದಲ್ಲಿ ಕಲಾವಿದರಾಗಿ ಸೇವೆಗೈಯುವ ಅವಕಾಶ ದೊರಕಿತು. ಅವರು ಆವಾಗಲೇ ಮುಂಬೈ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾವಿದ್ಯಾಲಯದಿಂದ ಸಂಗೀತದಲ್ಲಿ ವಿಶಾರದ ಪದವಿಯನ್ನು ಗಳಿಸಿದ್ದರು. ಹೀಗಾಗಿ ಅವರು ಹಾವೇರಿಯನ್ನು ತ್ಯಜಿಸಿ 1976ರಲ್ಲಿ ಕುಟುಂಬ ಸಮೇತ ಧಾರವಾಡಕ್ಕೆ ಬಂದು ನೆಲೆಸಿದರು. ಪಂ.ಚಂದ್ರಶೇಖರರು ಆಕಾಶವಾಣಿಯಲ್ಲಿ ಕೆಲಸ ಮುಗಿದ ನಂತರ, ಸಂಜೆಯ ವೇಳೆ ಸಂಗೀತ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಸಂಗೀತ ಪಾಠ ಮಾಡುತ್ತಿದ್ದರು. ಅಲ್ಲದೇ ಕೆಲವು ವಿದ್ಯಾರ್ಥಿಗಳಿಗೆ ಮನೆಪಾಠಗಳನ್ನು ಸಹ ಮಾಡಿ, ಎಂಟು ಮಕ್ಕಳ ತುಂಬು ಸಂಸಾರವನ್ನು ತಾಳ್ಮೆಯಿಂದ ನಿರ್ವಹಿಸಿದರು. ಪಂ.ಚಂದ್ರಶೇಖರರು ಆಕಾಶವಾಣಿಯಲ್ಲಿ ತಾನಪುರಾ ಕಲಾವಿದರಾಗಿ ಸೇವೆ ಸಲ್ಲಿಸಿ, 1986ರಲ್ಲಿ ನಿವೃತ್ತಿ ಹೊಂದಿದರು. ನಂತರ ದಿನವೀಡೀ ಸಂಗೀತ ಗುರುಗಳಾಗಿ ಸಂಗೀತಾಸಕ್ತ ಮಕ್ಕಳಿಗೆ ಮನೆಯಲ್ಲಿ ಪಾಠ ಮಾಡತೊಡಗಿದರು. ಅಚ್ಚರಿಯೆಂದರೆ ತಮ್ಮ ಇಳಿವಯಸ್ಸಿನಲ್ಲಿ ಅಂದರೆ 1993ರಿಂದ 1997ರವರೆಗೆ ಪಂ.ಚಂದ್ರಶೇಖರರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಅನುಪಮ ಸೇವೆ ಸಲ್ಲಿಸಿದರು.  

ಅತ್ಯುತ್ತಮ ಸಂಗೀತ ಶಿಕ್ಷಕರೆಂದು ಪ್ರಸಿದ್ಧಿ ಪಡೆದ ಅವರು ಗ್ವಾಲಿಯರ್ ಫರಾಣಾ ಗಾಯಕರಾಗಿದ್ದರು. ಪಂ.ಚಂದ್ರಶೇಖರ ಗಾಯನ ಒಳಗಣ ಗತಿ, ಮತಿಗಳಿಂದ ಹೊರಸೂಸುತ್ತಿದ್ದವು. ಅವರದು ಅಂತರಂಗದ ದನಿ. ಸಂಗೀತದ ರಸಜ್ಞತೆಯನ್ನು ತಿಳಿದು ಹಾಡಿದ ಗಾಯಕರು. ಅವರ ಗಾಯನ ಸಂಗೀತ ಬಲ್ಲವರನ್ನು, ಬಾರದವರನ್ನು ಖುಷಿಪಡಿಸುತ್ತಿತ್ತು. ಪಂ.ಪುರಾಣಿಕಮಠರವರು ಮುಂಬೈ, ಚೆನ್ನೈ, ಹೈದ್ರಾಬಾದ್, ಮಿರಜ, ಸೊಲ್ಲಾಪುರ, ಗೋವಾ, ಬೆಂಗಳೂರು, ಮೈಸೂರು, ವಿಜಯಪುರ, ಕುಂದಗೋಳ, ಹೊನ್ನಾವರ, ಶಿರ್ಸಿ ಮುಂತಾದ ಸ್ಥಳಗಳ ಪ್ರಸಿದ್ಧ ವೇದಿಕೆಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಠುಮ್ರಿ, ಭಜನೆ, ವಚನಗಳನ್ನು ಸುಶ್ರಾವ್ಯವಾಗಿ ಹಾಡಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ತಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ಪ್ರತಿವರ್ಷವೂ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆಯಲ್ಲಿ ಶಿಷ್ಯರೊಂದಿಗೆ ಪಾಲ್ಗೊಂಡು, ಸಂಗೀತ ಸೇವೆಯನ್ನು ಗುರುಗಳಿಗೆ ಸಮರ​‍್ಿಸುತ್ತಿದ್ದರು. 

ಪಂ.ಚಂದ್ರಶೇಖರ ಮುರಾಣಿಕಮಠರ ಶಿಷ್ಯಬಳಗ ದೊಡ್ಡದು. ಅವರು ಗುರುಗಳ ಇಚ್ಛೆಯಂತೆ ಸೇವೆ ಸಲ್ಲಿಸಿ, ಇಳಿವಯಸ್ಸಿನವರೆಗೂ ತಮ್ಮ ಸಂಗೀತವನ್ನು ಅನೇಕ ಶಿಷ್ಯರಿಗೆ ಧಾರೆಯೆರೆದಿದ್ದಾರೆ. ಸಂಗೀತಾ ಕಟ್ಟಿ, ಡಾ.ಶಾರದಾ ಭಟ್ಟ, ಗಣಪತಿ ಭಟ್ಟ, ಅರ್ಜುನ ವಠಾರ, ಅಯ್ಯಪ್ಪಯ್ಯ ಹಲಗಲಿಮಠ, ರಘುಪತಿ ಭಟ್ಟ, ಪ್ರತಿಭಾ ಮೇಲಿನಮನಿ, ಚಂದ್ರಕಲಾ ಹೆಗಡೆ, ರಾಧಾ ದೇಸಾಯಿ, ಎಂ.ಟಿ.ಭಾಗವತ, ಪ್ರೊ.ಇಂದುಧರ ಪೂಜಾರ, ಎಸ್‌.ಎಂ.ಭಟ್ಟ, ಜಿ.ಆರ್‌.ಭಟ್ಟ, ಪಂ.ಪರಮೇಶ್ವರ ಹೆಗಡೆ, ಡಾ.ಶಾಂತಾರಾಮ ಹೆಗಡೆ, ರಾಜೇಶ್ವರಿ ಹುಂಬಿ, ಡಾಽಽಮೀರಾ ಗುಂಡಿ, ರಾಜೇಶ್ವರಿ ಪಾಟೀಲ ಸೇರಿದಂತೆ ಇನ್ನೂ ಅನೇಕ ಶಿಷ್ಯಂದಿರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಪಂ.ಚಂದ್ರಶೇಖರ ಪುರಾಣಿಕಮಠರವರನ್ನು ಕೈಹಿಡಿದು ಬಂದ ಶಾಂತಮ್ಮ ಸಂಸಾರದ ನೊಗಹೊತ್ತು, ಪತಿಯ ಯಶಸ್ಸಿನ ಪ್ರತಿ ಹೆಜ್ಜೆಯಲ್ಲೂ ತಮ್ಮ ಸಹಕಾರ ನೀಡಿದ್ದಾರೆ. ಪಂ.ಪುರಾಣಿಕಮಠರವರಿಗೆ ಎಂಟು ಮಕ್ಕಳು. ಗಂಗಮ್ಮ, ಸುಶೀಲಾ, ಕುಮಾರ, ಪ್ರಭಯ್ಯ, ಸರೋಜಾ, ಸುನೀತಾ, ಶಿವಯೋಗಿ ಹಾಗೂ ಅನಿತಾ. ಕಿರಿಯ ಮಗಳು ಅನಿತಾ ಗಾಯಕಿಯಾಗಿದ್ದರು. ಆದರೆ ಗೃಹಿಣಿಯಾದ ಕೆಲವೇ ವರ್ಷಗಳಲ್ಲಿ ವಿಧಿವಶರಾದರು. ಸಧ್ಯ ಶಾಂತಮ್ಮನವರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿ ಮೊಮಕ್ಕಳೊಂದಿಗೆ ಧಾರವಾಡದ ಸಾಧನಕೇರಿಯ ಪ್ರಶಾಂತ ನಗರದಲ್ಲಿರುವ ‘ಗುರುಕೃಪಾ’ದಲ್ಲಿ ಸಂಗೀತಲೋಕದ ಸವ್ಯಸಾಚಿ ಪಂ.ಚಂದ್ರಶೇಖರ ನೆನಪುಗಳೊಂದಿಗೆ ನೆಲೆಸಿದ್ದಾರೆ.  

ಪಂ.ಚಂದ್ರಶೇಖರ ಪುರಾಣಿಕಮಠರು 1970ರಲ್ಲಿ ಧಾರವಾಡ ಆಕಾಶವಾಣಿಯ ಸುಗಮ ಸಂಗೀತಗಾರರಾಗಿ ಗುರುತಿಸಲ್ಪಟ್ಟರು. ಹಾಗೆಯೇ 1980ರಲ್ಲಿ ಧಾರವಾಡ ಆಕಾಶವಾಣಿಯಿಂದ ಬಿ.ಹೈ ಶ್ರೇಣೀಯ ಶಾಸ್ತ್ರೀಯ ಸಂಗೀತಗಾರರೆಂದು ಪ್ರಸಿದ್ಧಿ ಪಡೆದರು. 2005ರಲ್ಲಿ ಲಹರಿ ಕಂಪನಿಯು ಅವರ ಸುರಗುಂಜನ-1 ಹಾಗೂ 2 ಎಂಬ ಎರಡು ಧ್ವನಿಮುದ್ರಿಕೆಗಳನ್ನು ಹೊರತಂದಿತು. ಅಲ್ಲದೇ ದೆಹಲಿಯ ಸಂಗೀತ ನಾಟಕ ಅಕಾಡೆಮಿಯು  ಪಂ.ಚಂದ್ರಶೇಖರ ಜೀವನದ ಕುರಿತು ಸಾಕ್ಷ ಚಿತ್ರವನ್ನು ತಯಾರಿಸಿ ಬಿಡುಗಡೆಗೊಳಿಸಿತು. 1997ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು 70ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಾಗೆಯೇ 2007ರಲ್ಲಿ ಧಾರವಾಡದ ಕಲಾಭವನದಲ್ಲಿ ‘ನಾದ ಪೂರ್ಣಿಮಾ ಸಂಗೀತ ಸಭಾ’ಅಡಿಯಲ್ಲಿ 80ನೇ ಹುಟ್ಟುಹಬ್ಬವನ್ನು ಶಿಷ್ಯ ಬಳಗ ಬಲು ಸಂಭ್ರಮಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಶಿಷ್ಯಂದಿರು ಗುರುಗಳಿಗೆ ‘ನಾದ ಚಂದ್ರ’ ಎಂಬ ಸ್ಮರಣ ಸಂಚಿಕೆಯನ್ನು ಸಮರ​‍್ಿಸಿದರು. ಅಲ್ಲದೇ ಗುರುಗಳ ಗಾಯನದ ಮೂರು ಆಡಿಯೋ ವಿಡಿಯೋ ಧ್ವನಿ ಮುದ್ರಿಕೆಗಳು ಬಿಡುಗಡೆಗೊಂಡವು. ಕನ್ನಡದ ಅತಿ ಹಳೆಯ ಸಿನಿಮಾ ‘ಚಂದ್ರಹಾಸ’ದ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. 

ಪಂ.ಚಂದ್ರಶೇಖರ ಪುರಾಣಿಕಮಠ ಅವರ ಸಾಧನೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಬಸವಲಿಂಗ ಶಿವಯೋಗಿಗಳಿಂದ ಸಂಗೀತ ಕಲಾ ಸಾಗರ ಪ್ರಶಶ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿ, ಗಾನ ಯೋಗಿ ಪಂಚಾಕ್ಷರಿ ಗವಾಯಿ ಪ್ರಶಸ್ತಿ, ಗಾನಸಿರಿ, ಬಸವರಾಜ ರಾಜಗುರು ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಸಂಗೀತ ವಿದ್ವಾನ್ ಪ್ರಶಸ್ತಿ, ಮಹಾಂತ ಶ್ರೀ ಪ್ರಶಸ್ತಿ, ಸಂಗೀತ ರತ್ನ ಪ್ರಶಸ್ತಿ, ಸಂಗೀತ ಶಿರೋಮಣಿ, ನಾದ ತಪಸ್ವಿ ಹೀಗೆ ಇನ್ನೂ ಹಲವಾರು ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನಗಳು ಅವರ ಸಾಧನೆಗೆ ಸಂದಿವೆ.  

ಪಂ.ಚಂದ್ರಶೇಖರ ಪುರಾಣಿಕಮಠರು ಯಾವಾಗಲೂ ಬಿಳಿಧೋತಿ, ಬಿಳಿಜುಬ್ಬಾ, ತಲೆಯ ಮೇಲೆ ಕರಿಟೋಪಿ ಧರಿಸುತ್ತಿದ್ದರು. ಅವರು ತಾಳ್ಮೆ, ಸಹಿಷ್ಣುತೆಗಳ ತಾಣವಾಗಿದ್ದರು. ಇನ್ನೊಬ್ಬರ ಕಷ್ಟಗಳಿಗೆ ಮರುಗುವ, ಸದಾ ಸಹಾಯಹಸ್ತವನ್ನು ನೀಡುವ ಸ್ನೇಹಜೀವಿಯಾಗಿದ್ದರು. ಪಂ.ಚಂದ್ರಶೇಖರರು 1990ರಲ್ಲಿ ಬಹುದೊಡ್ಡ ಅಪಘಾತಕ್ಕೀಡಾಗಿ ಮರುಜೀವ ಪಡೆದು, ಸಂಗೀತ ಸರಸ್ವತಿಯ ಸೇವೆಯಲ್ಲಿ ತಮ್ಮನ್ನು ಅರ​‍್ಿಸಿಕೊಂಡಿದ್ದರು. ಪಂ.ಚಂದ್ರಶೇಖರರು 24 ಜುಲೈ 2010, ಗುರುಪೂರ್ಣಿಮೆಯಂದು ಸಂಗೀತದಲ್ಲಿ ಲೀನವಾದರು. ಜೀವನದಲ್ಲಿ ಬರುವ ಕಷ್ಟ ನಷ್ಟವೆಲ್ಲ ಸಂಗೀತ ಮುಂದೆ ಅಲ್ಪ ಎಂಬುದನ್ನು ಪಂ.ಚಂದ್ರಶೇಖರರು ಈ ನಾಡಿಗೆ ತೋರಿಸಿಕೊಟ್ಟು ಅಜರಾಮರರಾದರು.  

- ಸುರೇಶ ಗುದಗನವರ 

        ಧಾರವಾಡ  

         9449294694 


- * * * -