ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸಮುದಾಯ ಭವನಕ್ಕೆ ಶೀಘ್ರ ಚಾಲನೆ

ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸಮುದಾಯ ಭವನಕ್ಕೆ ಶೀಘ್ರ ಚಾಲನೆ  Savitribai Phule and Jyotiba Phule Community Hall to be inaugurated soon


ಬೆಳಗಲಿ 9: ಪಟ್ಟಣದ ಮಾಳಿ ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸಮುದಾಯ ಭವನದ ನಿರ್ಮಾಣಕ್ಕೆ ವಿಧಾನಸಭಾ ಸದಸ್ಯ ಆರಿ​‍್ಬ. ತಿಮ್ಮಾಪುರ ಅವರು ಭೂಮಿಪೂಜೆ ನೆರವೇರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತಿಮ್ಮಾಪುರ, ಶೋಷಿತ ವರ್ಗಗಳ ಮಹಿಳೆಯರಿಗಾಗಿ ದೇಶದಲ್ಲೇ ಮೊದಲ ಶಾಲೆ ಸ್ಥಾಪಿಸಿ ಅಕ್ಷರದ ಬೆಳಕು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಭವನಕ್ಕೆ ಈಗಾಗಲೇ 35 ಲಕ್ಷ ಅನುದಾನ ನೀಡಲಾಗಿದೆ. ಇನ್ನೂ 15 ಲಕ್ಷ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  

ಒಟ್ಟು 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದೆ. ಸಮಾಜದ ಮಹನೀಯರ ತ್ಯಾಗ, ಬಲಿದಾನ ಹಾಗೂ ಸಮಾಜ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸಲಾಗುತ್ತಿದೆ. ಮಹನೀಯರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಸಿದ್ಧಾರೂಢ ಆಶ್ರಮದ ಪ.ಪೂ. ಜ್ಞಾನೇಂದ್ರ ಮಹಾಸ್ವಾಮಿಗಳು ಪೂಜಾ ಕಾರ್ಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಬಸಪ್ಪ ಮಂಟೂರ, ಉಪಾಧ್ಯಕ್ಷೆ ಸವಿತಾ ಚವ್ಹಾಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.