ಮನಸ್ಸುಗಳನ್ನು ಕಟ್ಟುವ ಕಾರ್ಯ ಆಗಬೇಕು: ಶಾಸಕ ನಾಡಗೌಡ
Efforts must be made to build bridges between minds: MLA Nadagouda
ತಾಳಿಕೋಟಿ 09: ಜಗತ್ತಿನ ಎಲ್ಲ ಧರ್ಮಗಳು ಮಾನವ ಕಲ್ಯಾಣವನ್ನೇ ಬಯಸುತ್ತವೆ. ಬುದ್ಧ, ಬಸವ ಹಾಗೂ ಪ್ರವಾದಿ ಮೊಹಮ್ಮದ್ ಅವರು ಯಾವುದೇ ಜಾತಿ ಅಥವಾ ವರ್ಗಕ್ಕೆ ಸೀಮಿತರಾಗಿರಲಿಲ್ಲ. ಅವರ ಸಂದೇಶ ಇಡೀ ಮಾನವಕುಲಕ್ಕೆ ಸೇರಿದ್ದು, ಧರ್ಮಗಳನ್ನು ಸೀಮಿತಗೊಳಿಸುವ ಕಾರ್ಯ ನಿಲ್ಲಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು. ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮೊಹಮ್ಮದ್ (ಸ)’ ವಿಷಯದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ವಿವಿಧ ಧರ್ಮಗಳ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿರುವ ಸಂಘಟನೆಯನ್ನು ಅಭಿನಂದಿಸುವುದಾಗಿ ಹೇಳಿದರು. ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ಮಾತನಾಡಿ, ಧರ್ಮದ ಬಾಹ್ಯ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ ಅದರ ತಿರುಳನ್ನು ಅರಿತುಕೊಳ್ಳಬೇಕು.
ಬುದ್ಧ, ಬಸವ ಹಾಗೂ ಮೊಹಮ್ಮದ್ ಅವರು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ್ದಾರೆ. ಅವುಗಳ ಆಧಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕುವ ಅಗತ್ಯವಿದೆ ಎಂದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಧರ್ಮದ ಆಚಾರ-ವಿಚಾರಗಳನ್ನು ಪಾಲಿಸುವುದರ ಜೊತೆಗೆ ಇತರ ಧರ್ಮಗಳನ್ನೂ ತಿಳಿದುಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು.
ಪ್ರವಚನಕಾರ ಲಾಲಹುಸೇನ ಕಂದಗಲ್ ಅವರು ‘ಕ್ರಾಂತಿಯ ಜ್ಯೋತಿ ಪ್ರವಾದಿ ಮೊಹಮ್ಮದ್ (ಸ)’ ವಿಷಯ ಕುರಿತು ಉಪನ್ಯಾಸ ನೀಡಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಮಾತನಾಡಿದರು. ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ್ ಖಾಜಿ ಹಾಗೂ ಫಾದರ್ ಸುನೀಲ್ ಅಂದ್ರಾದೆ ಸಾನಿಧ್ಯ ವಹಿಸಿದ್ದರು. ಜಮಾತೆ ಇಸ್ಲಾಮಿ ಹಿಂದ್ ಮಾಜಿ ವಿಭಾಗೀಯ ಸಂಚಾಲಕ ಮಹೆಬೂಬ ಆಲಂ ಬಡಗಣ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಖ್ಯಾತ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ಕರವೇ ವತಿಯಿಂದ ಸನ್ಮಾನಿಸಲಾಯಿತು. ಡಾ.ವಿ.ಎಸ್. ಕಾರ್ಚಿ, ಉಮಾ ಬಸವರಾಜ ಸಾಲಂಕಿ, ಖುರ್ಶಿದ್ ಮೋಮಿನ, ಮೌಲಾನಾ ಅಜರನದ್ದೀನ ಖಾಸ್ಮಿ, ಎಂ.ಎ. ಮೇತ್ರಿ, ಹುಸೇನ ಪಟೇಲ, ಮುಜಹೀದ ನಮಾಜಕಟ್ಟಿ ಸೇರಿದಂತೆ ವಿವಿಧ ಸಮಾಜಗಳ ಗಣ್ಯರು, ಹಿರಿಯರು, ಮಹಿಳೆಯರು ಹಾಗೂ ಜಮಾತೆ ಇಸ್ಲಾಮಿ ಹಿಂದ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 