ಆಧಾರರಹಿತ ಆರೋಪ ಖಂಡನೆ: ಸೂಕ್ತ ದಾಖಲೆ ನೀಡಲು ಆಗ್ರಹ

ಆಧಾರರಹಿತ ಆರೋಪ ಖಂಡನೆ: ಸೂಕ್ತ ದಾಖಲೆ ನೀಡಲು ಆಗ್ರಹ  Condemnation of baseless allegations: Demand for production of appropriate documents

ಲೋಕದರ್ಶನ ವರದಿ 

ಚಡಚಣ 9: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಖಂಡನೀಯ ಎಂದು ಚಡಚಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ ಹೇಳಿದರು.  

ಚಡಚಣ ತಹಶೀಲ್ದಾರ್ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಗೃಹ ಸಚಿವರಿಗೆ ಸಂಘದ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಪರವಾಗಿ ರವಿಕುಮಾರ ಎಸ್‌. ಚವಾಣ್ ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.  

ಪತ್ರಕರ್ತರ ಹಿತಾಸಕ್ತಿ ಹಾಗೂ ಕಲ್ಯಾಣಕ್ಕಾಗಿ ಸಂಘವು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಚುನಾಯಿತ ಪದಾಧಿಕಾರಿಗಳ ವಿರುದ್ಧ ಯಾರೇ ಆರೋಪ ಮಾಡಿದರೂ ಸೂಕ್ತ ದಾಖಲೆ ಮತ್ತು ಸಾಕ್ಷ್ಯಾಧಾರ ಒದಗಿಸಬೇಕು ಎಂದು ರಾಜಶೇಖರ ಡೋಣಜಮಠ ಆಗ್ರಹಿಸಿದರು.  

ವೈಯಕ್ತಿಕ ದ್ವೇಷ ಅಥವಾ ದುರುದ್ದೇಶದಿಂದ ಆಧಾರರಹಿತ ಆರೋಪ ಮಾಡಿ ಸಂಘದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ. ಆರೋಪಗಳು ಸತ್ಯವೆಂದು ಸಾಬೀತಾದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ ಬಿರಾದಾರ, ಖಜಾಂಚಿ ವಿನಯ ಜೀರಂಕಲಗಿ, ಜಿಲ್ಲಾ ಕಾರ್ಯಕಾರಿ ಸದಸ್ಯ ಶಿವಾನಂದ ಶಿವಶರಣ, ಕಾರ್ಯದರ್ಶಿ ಪ್ರಶಾಂತ ಮುಂಡೇವಾಡಿ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.