ಮಾತಾ ಅಮೃತಾನಂದಮಯಿ ದೇವಿ ಶಿಷ್ಯರಿಂದ ಸತ್ಸಂಗ

ಧಾರವಾಡ 26: ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿ, ಧಾರವಾಡ ಹಾಗೂ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಧಾರವಾಡ ಮತ್ತು ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ,   ಲಲಿತಾ ಬ. ಗೊಬ್ಬರಗುಂಪಿ ಕಲಾ ಮತ್ತು ಶಂಭುಲಿಂಗಪ್ಪ. ವ್ಹಿ. ಬುಡಪನಹಳ್ಳಿ  ವಾಣಿಜ್ಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡ ಇವರ  ಸಂಯುಕ್ತ ಆಶ್ರಯದಲ್ಲಿ ತಪಸ್ವಿನಿ ಮಾತಾ ಅಮೃತಾನಂದಮಯೀ ದೇವಿ ಅವರ ಶಿಷ್ಯರಾದ ಲತಾ ಮುಲ್ಕಿ ಮತ್ತು ವಿಜಯ ಮುಲ್ಕಿ ಇವರಿಂದ  ಸತ್ಸಂಗವನ್ನು ಏರ್ಪಡಿಸಲಾಗಿದ್ದು, ಮಾತೆಯ ಫಲಕ, ಪಾದ ಫಲಕ (ಫೋಟೂ)ಗಳಿಗೆ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಆನಂತರ ಮಾತಾ ಅಮೃತಾನಂದಮಯೀ ಅವರ ಮೂಲ ಹೆಸರು ಸುಧಾಮಣಿ ಅವರು ತಮ್ಮ ಎರಡನೇ ವರ್ಷದಲ್ಲಿ ಭಗವಂತನ ಸ್ಮರಿಸುವುದರ ಜೊತೆಗೆ ಭಗವಂತನ ಕುರಿತು ಹಲವಾರು ಕೀರ್ತನೆಗಳನ್ನು ಬರೆಯಲು ಆರಂಭಿಸಿದರು ತಮ್ಮ  ನಾಲ್ಕನೇಯ ವಯಸ್ಸಿನಲ್ಲಿಯೇ ತಮ್ಮ ತಾಯಿಯ ಆರೋಗ್ಯದ ಕಾರಣ ತಮ್ಮ ಮನೆಯ ನಿರ್ವಹಣೆಯ ಭಾರವನ್ನು ಹೊತ್ತುಕೊಂಡರು. ಒಂಬತ್ತನೇಯ ವಯಸ್ಸಿನಲ್ಲಿಯೆ ಪ್ರತಿ ಕೆಲಸದಲ್ಲಿಯು, ಪ್ರತಿ ಅಣುವಿನಲ್ಲಿಯೂ ಶ್ರೀ ಕೃಷ್ಣನನ್ನು ಕಾಣಲು ಆರಂಭಿಸಿದರು. ತಮ್ಮ 18ನೇಯ ವಯಸ್ಸಿನಲ್ಲಿಯೇ ಭಗವಂತನ ಸಾಕ್ಷ್ಷಾತ್ಕಾರ ಅವರಿಗೆ ಆಯಿತು. ಆಗ ಅವರು ತಮ್ಮ ಸುತ್ತ ಮುತ್ತಲಿನ ಜನರನ್ನು, ಜನರ ಹಸಿವನ್ನು ನೋಡಿ ಮಮ್ಮಲ ಮರುಗಿ ನೀರು ಕುಡಿದು ಮಲಗಲು ಆರಂಭಿಸಿದರು.ಅವರು ಹಲವಾರು ಪವಾಡಗಳನ್ನು ಮಾಡಿದರು ಆನಂತರ ಭಕ್ತಾದಿಗಳು ಅವರಿಗೆ ದೇಣಿಗೆಯನ್ನು ಅರ್ಪಿಸಿದರು. ಹೀಗೆ ಅವರ ಶಿಷ್ಯರು ಮಾತಾ ಅಮೃತಾನಂದಮಯೀ ಅವರ ಬಾಲ್ಯದ ಕುರಿತು, ಅವರ ಪವಾಡಗಳ ಮೇಲೆ ಬೆಳಕು ಬೀರಿದರು.

ಇತರರಿಗಾಗಿ ನಿಮ್ಮಲ್ಲಿ ಇರುವಂತಹ ಧನವನ್ನು ಉಪಯೋಗಿಸಿರಿ, ದುಂದುವೆಚ್ಚ ಮಾಡದಿರಿ ಅದನ್ನು ಸದುಪಯೋಗಕ್ಕೆ ಬಳಸಿರಿ ಎಂದು ಮಕ್ಕಳಿಗೆ ಬೋಧಿಸಿದರು ಪ್ರೇಮ, ಭಕ್ತಿ ಮತ್ತು ತ್ಯಾಗ ಮಂತ್ರಗಳ ಪಠಣವೇ ಇಂದಿನ ಮಕ್ಕಳಲ್ಲಿ ಆಗಬೇಕು ಶಿಕ್ಷಣವೆನ್ನುವುದು ಜೀವನದ ಮುಂದುವರಿಕೆಗೆ ಆಧ್ಯಾತ್ಮವೆನ್ನುವದು ಜೀವನದ ಸಾರ್ಥಕತೆಗೆ ಸಾಗುವಂತೆ ಮಾಡುತ್ತದೆಂದು ತಿಳಿಸಿದರು.

ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿಗಳು ಹಾಗೂ  ಖ್ಯಾತ ಹಿರಿಯ ನ್ಯಾಯವಾದಿ ಎಂ. ಸಿ. ಬಂಡಿ ಇವರು ಸ್ವಾಗತ ಹಾಗೂ ಪರಿಚಯ ಮಾಡಿದರು.  ಸಮಿತಿಯ ಕಾರ್ಯಾಧ್ಯಕ್ಷ ಎಸ್.ವ್ಹಿ. ಬುಡಪನಹಳ್ಳಿ, ಸದಸ್ಯ ಎಂ. ಟಿ. ಮಲ್ಲಾಡದ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ವಿ. ಕೊಲ್ಲಾವರ ಇವರು ನಿರೂಪಣೆ ಮಾಡಿದರು,  ಕಾವೇರಿ ಬೆಂಗೇರಿ  ಇವರು  ವಚನ ಗಾಯನ ಮಾಡಿದರು ಹಾಗೂ ಡಾ. ಗಿರಿಜಾ. ಎಂ. ಯಾಬಣ್ಣವರ ವಂದನಾರ್ಪಣೆ ಮಾಡಿದರು.              

ಗಣ್ಯಮಾನ್ಯರು, ಮಾತೆಯ ಅಪಾರ ಭಕ್ತವೃಂದದವರು ಹಾಗೂ ಎರಡೂ ಮಹಿಳಾ ಮಹಾವಿದ್ಯಾಲಯಗಳ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.