ಭಾರತೀಯ ಸಿನಿಮಾಗಳ ಪ್ರಪ್ರಥಮ ಮಹಿಳಾ ಸಂಗೀತ ನಿರ್ದೇಶಕಿ ಸರಸ್ವತಿದೇವಿ

ಅದೇ ಆಗ ಭಾರತಿಯ ಚಲನಚಿತ್ರ ರಂಗ ಕಣ್ತೆರೆದಿತ್ತು. ಮೂಕಿ ಚಿತ್ರಗಳ ಕಾಲ ಹಿಂದೆ ಸರಿದು ಟಾಕಿ ಚಿತ್ರಗಳ ಕಾಲ ಕಾಲಿಟ್ಟಿತ್ತು. ಸಿನಿಮಾ ರಂಗಕ್ಕೆ ಹೆಣ್ಣು ಮಕ್ಕಳು ಬರುವದನ್ನು ಕೆಲವು ಜನಾಂಗದವರು ಇಷ್ಟಪಡುತ್ತಿದ್ದಿಲ್ಲ. ಅಂತಹ ಸಮಯದಲ್ಲಿ ಮುಂಬಯಿಯ ಫಾರ್ಸಿ ಕುಟುಂಬವೊಂದರಲ್ಲಿ 1-8-1912 ರಂದು ಜನಿಸಿದ ಸರಸ್ವತಿದೇವಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿತು ತನ್ನ 23ನೇ ವಯಸ್ಸಿನಲ್ಲೇ ಸಿನಿಮಾ ರಂಗದ ಮೊದಲ ಮಹಿಳಾ ಸಂಗೀತ ನಿರ್ದೇಶಕಿಯಾಗಿ ಸುಮಾರು 1961 ರತನಕ ಅಂದರೆ ಸುಮಾರು 25 ವರ್ಷಗಳ ಅವಧಿಯಲ್ಲಿ 30-35 ಸಿನಿಮಾಗಳಿಗೆ ರಾಗ ಸಂಯೋಜನೆ ಮಾಡಿದರು. ಸರಸ್ವತಿದೇವಿ ಚಿತ್ರರಂಗದ ಚರಿತ್ರೆಯಲ್ಲಿ ವಿಶಿಷ್ಟ ದಾಖಲೆಯನ್ನೇ ಮಾಡಿದ್ದಾರೆ.   

ನಾವೆಲ್ಲ ಪಡೋಸನ್ ಚಿತ್ರದಲ್ಲಿ ಕಿಶೋರ ಕುಮಾರ ಮತ್ತು ಮನ್ನಾಡೆ ಹಾಡಿದ “ಎಕ್ ಚತುರ ನಾರ ಕರಕೇ ಸಿಂಗಾರ” ಎಂಬ ಜನಪ್ರಿಯ ಹಾಡನ್ನು ಕೇಳಿ ಆನಂದಿಸಿದ್ದೇವೆ. ಆದರೆ ಆ ಹಾಡಿನ ರಾಗಸಂಯೋಜನೆಯನ್ನು ಮೊಟ್ಟಮೊದಲ ಸಲ “ಝೂಲಾ” ಚಿತ್ರಕ್ಕಾಗಿ 1941ರಲ್ಲಿ ಮಾಡಿದ್ದು ಇದೇ ಸರಸ್ವತಿದೇವಿ. ಆಗ ಅದನ್ನು ಹಾಡಿದ್ದು ಅಶೋಕಕುಮಾರ್‌.   

ತಂದೆಯ ಪ್ರೋತ್ಸಾಹದೊಂದಿಗೆ ಚಿತ್ರರಂಗಕ್ಕೆ ಬಂದ ಸರಸ್ವತಿ ದೇವಿ ಮತ್ತು ಅವಳ ತಂಗಿ ಚಂದ್ರ​‍್ರಭಾ ಇಬ್ಬರೂ ತಮ್ಮ ಜನಾಂಗದವರಿಂದ ಪ್ರಬಲ ವಿರೋಧ ಎದುರಿಸಬೇಕಾಯಿತು. ಆದರೆ ತಂದೆ ಖುರ್ಶಿದ್ ಹೋಮ್ ಜಿ, ನಿರ್ಮಾಪಕ ಹಿಮಾಂಶು ರೈ ಮೊದಲಾದವರು ಅವರಿಗೆ ರಕ್ಷಣೆ ನೀಡಿದರು. ಸರಸ್ವತಿದೇವಿ ಮತ್ತು ಚಂದ್ರ​‍್ರಭ ಎಂಬುದು ಹೋಮಜಿ ಸಹೋದರಿಯರಿಗೆ ಇಡಲಾದ ಸಿನಿಮಾ ರಂಗದ ಹೆಸರುಗಳು. ಸರಸ್ವತಿ ದೇವಿ ಅಂದಿನ ಖ್ಯಾತ ಗಾಯಕ ಪಂ. ವಿಷ್ಣು ನಾರಾಯಣ ಭಾತಖಾಂಡೆ ಅವರಲ್ಲಿ ಸಂಗೀತ ಕಲಿತರು. ಧ್ರುಪದ್ ಧಮಾರ್ ಗಾಯನ ಪದ್ಧತಿಯಲ್ಲಿ ಭಾತಖಾಂಡೆಯವರದು ದೊಡ್ಡ ಹೆಸರು. ನಟಿ ನರ್ಗಿಸ್ ತಾಯಿ ಜದ್ದನಬಾಯಿ ಸಹ ಅಂದಿನ ಪ್ರಸಿದ್ಧ ಗಾಯಕಿಯಾಗಿದ್ದರು.   

ಸರಸ್ವತಿದೇವಿಯವರ ಮೊದಲ ಸಂಗೀತ ನಿರ್ದೇಶನದ ಸಿನಿಮಾ 1935ರಲ್ಲಿ ಬಂದ “ಜವಾನಿಕಿ ಹವಾ”. ಹಿಮಾಂಶು ರೈ- ದೇವಿಕಾರಾಣಿ ಜೋಡಿ. ರೈ ಅವರೇ ನಿರ್ಮಾಪಕರು. 1936 ರಲ್ಲಿ ಬಂದ ‘ಅಛೂತ್ ಕನ್ಯಾ’ ಅವರಿಗೆ ದೊಡ್ಡ ಹೆಸರು ತಂದಿತು. ಅಶೋಕಕುಮಾರ ದೇವಿಕಾರಾಣಿ ಜೋಡಿ. ಮುಂದೆ ಎರಡು ದಶಕಗಳ ಕಾಲ ಸರಸ್ವತಿದೇವಿಯವರು ಅನೇಕ ಸಿನೆಮಾಗಳಿಗೆ ಸಂಗೀತ ನೀಡಿ ಬಾಲಿವುಡ್‌ನ ಪ್ರಸಿದ್ಧರ ಸಾಲಿಗೆ ಸೇರಿದರು. ಮಮತಾ, ಮಿಯಾಬೀವಿ, ಇಜ್ಜತ, ಜೀವನ ಪ್ರಭಾತ, ಪ್ರೇಮಕಹಾನಿ, ನಿರ್ಮಲಾ, ವಚನ್, ದುರ್ಗಾ, ಕಂಗನ್, ಬಂಧನ್, ಭಾಭಿ, ಪೃಥ್ವಿ ವಲ್ಲಭ, ಉಷಾಹರಣ್, ಖಾನದಾನಿ, ಆಮ್ರಪಾಲಿ,ಮೊದಲಾದ ಚಿತ್ರಗಳು ಅವರ ಸಮಗೀತ ನಿರ್ದೇಶನ ಪಡೆದವು. ಮೂರು ನಾಲ್ಕು ಚಿತ್ರಗಳಿಗೆ ಮಾತ್ರ ಬೇರೆಯವರ ಜೊತೆಗೂಡಿ ನಿರ್ದೇಶಿಸಿದರು. ಕೋಯಿ ಹಮ್ ದಮ್ ನ ರಹಾ, ಎಕ್ ಚತುರ ನಾರಿ ಮೊದಲಾದ ಹಾಡುಗಳು ಅವರಿಗೆ ಖ್ಯಾತಿ ತಂದವು.  

ಅವಿವಾಹಿತೆಯಾಗಿಯೇ ಉಳಿದ ಅವರು 1980 ಅಗಸ್ಟ್‌ 9 ರಂದು ನಿಧನ ಹೊಂದಿದರು. ಆದರೆ ಅವರ ಹೆಸರು ಭಾರತೀಯ ಚಲನಚಿತ್ರರಂಗದಲ್ಲಿ ಅಜರಾಮರವಾಗಿ ಉಳಿದಿದೆ.   

- * * * -